Wednesday, November 12, 2025

ಆರ್ ​ಸಿ ಬಿ ಫ್ಯಾನ್ಸ್ ಗೆ ಬ್ಯಾಡ್ ನ್ಯೂಸ್: 2026ರ IPL ನ ಎಲ್ಲ ಪಂದ್ಯ ಬೆಂಗಳೂರಿನಿಂದ ಶಿಫ್ಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ​ಸಿ ಬಿ) ತಂಡವು ಮುಂದಿನ ಸೀಸನ್​ನಲ್ಲಿ ಹೊಸ ಸ್ಟೇಡಿಯಂನಲ್ಲಿ ಕಣಕ್ಕಿಳಿಯಲಿದೆ. ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ 2ನೇ ತವರು ಮೈದಾನವನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆಯಿದೆ. ಇದಕ್ಕೆ ಕಾರಣ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸುವುದು ಅನುಮಾನವಾಗಿದೆ.

ಮುಂಬರುವ 2026ರ ಐಪಿಎಲ್ ಆವೃತ್ತಿಯಲ್ಲಿ RCB ತಂಡದ ಯಾವುದೇ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುವುದಿಲ್ಲ ಎನ್ನಲಾಗುತ್ತಿದೆ. ಆರ್‌ಸಿಬಿಯ ತವರು ಮೈದಾನ ಕರ್ನಾಟಕದಿಂದಲೇ ಎತ್ತಂಗಡಿ ಆಗುವ ಎಲ್ಲಾ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.

ಸಾಮಾನ್ಯವಾಗಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ಫ್ರಾಂಚೈಸಿಗಳ ತವರು ಕ್ರೀಡಾಂಗಣದಲ್ಲಿ ಮರು ವರ್ಷದ ಐಪಿಎಲ್‌ ಟೂರ್ನಿ ಉದ್ಘಾಟನೆ ನಡೆಯುತ್ತದೆ. ಹಾಗೆಯೇ 19ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದ್ರೆ ಚಿನ್ನಸ್ವಾಮಿ ಕ್ರೀಡಾಂಗಣದಿಂದಲೇ ಟೂರ್ನಿ ಎತ್ತಂಗಡಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆಯೂ ಹಲವು ಕಾರಣಗಳಿಗಾಗಿ ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ತಮ್ಮ ತವರು ಮೈದಾನವನ್ನ ಬದಲಾಯಿಸಿಕೊಂಡಿದ್ದವು. 2009 ರಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭದ್ರತಾ ಕಾರಣಗಳಿಗಾಗಿ ಇಡೀ ಟೂರ್ನಿಯನ್ನು ದಕ್ಷಿಣ ಆಫ್ರಿಕಾಗೆ ಸ್ಥಳಾಂತರಿಸಲಾಗಿತ್ತು. 2022ರಲ್ಲಿ ಕೋವಿಡ್ ಕಾರಣಗಳಿಗಾಗಿ ಟೂರ್ನಿ ದುಬೈಗೆ ಶಿಫ್ಟ್‌ಆಗಿತ್ತು. ಆಗ ಆರ್‌ಸಿಬಿ ಸೇರಿದಂತೆ ಎಲ್ಲಾ ತಂಡಗಳೂ ತಮ್ಮ ತವರು ಕ್ರೀಡಾಂಗಣವನ್ನ ತೊರೆದಿದ್ದವು. ಆದರೆ ಕಳೆದ ಬಾರಿಯ ಕಾಲ್ತುಳಿತ ದುರಂತ ಪ್ರಕರಣ ಈಗ ಆರ್‌ಸಿಬಿ ತವರು ನೆಲವನ್ನ ತೊರೆಯುವಂತೆ ಮಾಡಿದೆ.

ವರದಿಗಳ ಪ್ರಕಾರ, ಆರ್‌ಸಿಬಿ ತನ್ನ ಎಲ್ಲಾ ತವರು ಪಂದ್ಯಗಳನ್ನ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (MCA) ಕ್ರೀಡಾಂಗಣದಲ್ಲಿ ಆಡುವ ಸಾಧ್ಯತೆಯಿದೆ. ಈ ಕುರಿತು MCA ಕಾರ್ಯದರ್ಶಿ ಕಮಲೇಶ್ ಪೈ ಮಾತನಾಡಿ, ಪುಣೆಯಲ್ಲಿ RCB ಪಂದ್ಯಗಳನ್ನ ಆಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಇದು ಇನ್ನೂ ಖಚಿತವಾಗಿಲ್ಲ. ಬೆಂಗಳೂರಿನಲ್ಲಿ ನಡೆದ ದುರಂತದ ಕಾರಣದಿಂದಾಗಿ ಅಲ್ಲಿ ಪಂದ್ಯಗಳನ್ನು ಆಯೋಜಿಸಲು ಸಮಸ್ಯೆ ಎದುರಾಗಿದೆ. ಆದ್ದರಿಂದ ಅವರು ಬೇರೆ ಕ್ರೀಡಾಂಗಣ ಹುಡುಕುತ್ತಿದ್ದಾರೆ. ನಮ್ಮ ಕ್ರೀಡಾಂಗಣವನ್ನು ಒದಗಿಸಲು ನಾವು ಮುಂದೆ ಬಂದಿದ್ದೇವೆ. ಪ್ರಾಥಮಿಕ ಚರ್ಚೆಗಳು ನಡೆದಿವೆ. ಕೆಲವು ತಾಂತ್ರಿಕ ವಿಷಯಗಳನ್ನು ಪರಿಹರಿಸಬೇಕಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಪುಣೆ ಆರ್‌ಸಿಬಿಯ ಪಂದ್ಯಗಳನ್ನು ಆಯೋಜಿಸಲಿದೆ ಎಂದು ತಿಳಿಸಿದ್ದಾರೆ.

error: Content is protected !!