ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅತ್ಯಂತ ಕೀಳು ಮಟ್ಟದ ಭಾಷೆ ಪ್ರಯೋಗಿಸಿ ಅಪಮಾನ ಮಾಡಿರುವ ಮಂಗಳ ಎಂಬ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜೆಡಿಎಸ್ ಮುಖಂಡರು ಆದ ವಕೀಲ ರಘುನಂದನ್ ಎಂ.ಎಸ್ ಅವರು ಮಂಡ್ಯದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಹಾಗೂ ದರ್ಶನ್ ಪ್ರಕರಣಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಆದಾಗ್ಯೂ ಅನಾವಶ್ಯಕವಾಗಿ ದರ್ಶನ್‌ರವರ ಪ್ರಕರಣದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರನ್ನು ಎಳೆದುತಂದು ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟ್ರಾಗ್ರಾಮ್, ಪೇಸ್‌ಬುಕ್‌ನಲ್ಲಿ ಬಾಯಿಗೆ ಬಂದ ಹಾಗೆ ಬೈದು ಅವಮಾನ ಮಾಡಿರುವುದರಿಂದ ಜೆಡಿಎಸ್ ಪಕ್ಷದ ಕಾರ‌್ಯಕರ್ತರಿಗೆ, ಮುಖಂಡರಿಗೆ, ನಾಯಕರುಗಳಿಗೆ ಬಹಳ ನೋವಾಗಿದೆ ಎಂದು ಆರೋಪಿಸಿದ್ದಾರೆ.
ಸದರಿ ವೀಡಿಯೋ ತುಂಬಾ ವೈರಲ್ ಆಗಿದ್ದು, ಜೆಡಿಎಸ್ ಪಕ್ಷದ ಎಲ್ಲಾ ಕಾರ‌್ಯಕರ್ತರಿಗೂ ನೋವಾಗಿದೆ. ಆದ್ದರಿಂದ ಸದರಿ ಮಂಗಳ ಮತ್ತು ಅವರಿಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣದ ಖಾತೆಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ದೂರು ನೀಡಿದ್ದಾರೆ.
ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಜೆಡಿಎಸ್ ಮುಖಂಡರಾದ ನಾಗೇಶ, ವಸಂತ್‌ರಾಜು, ಬೂದನೂರು ಸ್ವಾಮಿ, ಮಾಚಗೌಡನಹಳ್ಳಿ ಮೋಹನ್, ವರದರಾಜು, ರಾಕೇಶ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.