ಹೊಸದಿಗಂತ ವರದಿ, ಬಾಗಲಕೋಟೆ:
ಕರ್ನಾಟಕ ವಾಯವ್ಯ ಪದವೀಧರ ಮತ್ತು ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಜೂನ್ 13 ರಂದು ಮತದಾನ ನಡೆಯಲಿದ್ದು, ತಹಶೀಲ್ದಾರ ಕಚೇರಿಗಳಲ್ಲಿ ಸ್ಥಾಪಿಸಲಾದ ವಿವಿಧ ಮಸ್ಟರಿಂಗ್ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ರವಿವಾರ ಭೇಟಿ ನೀಡಿ ಪರಿಶೀಲಿಸಿದರು.
ಬಾಗಲಕೋಟೆ ಹಾಗೂ ಹುನಗುಂದ ತಾಲೂಕಿನ ತಹಶೀಲ್ದಾರ ಕಚೇರಿಯ ಮಸ್ಟರಿಂಗ್ ಕೇಂದ್ರಗಳಲ್ಲಿ ಮತಗಟ್ಟೆಗಳಿಗೆ ಕಳುಹಿಸಬಹುದಾದ ಮತಪೆಟ್ಟಿಗೆ, ಮತದಾನಕ್ಕೆ ಬೇಕಾಗುವ ಎಲ್ಲ ಸಾಮಗ್ರಿಗಳನ್ನು ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಅವರು ಬಾಗಲಕೋಟೆ ತಾಲೂಕಿನಲ್ಲಿ ಒಟ್ಟು 8 ಮತಗಟ್ಟೆಗಳಿದ್ದು, ಮತಗಟ್ಟೆ ಅಧಿಕಾರಿಗಳಿಗೆ ಬೇಕಾಗುವ ಎಲ್ಲ ಮತದಾನದ ಸಾಮಗ್ರಿಗಳನ್ನು ನೀಡಲಾಗುತ್ತಿದೆ. ಡಿಮಸ್ಟರಿಂಗ್ ಸಹ ಈ ಕೇಂದ್ರದಲ್ಲಿಯೇ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಜಿಲ್ಲಾಡಳಿತ ಸನ್ನದ್ದವಾಗಿದೆ. ಮತದಾನ ಸುಗಮ ಹಾಗೂ ಮುಕ್ತವಾಗಿ ಜರುಗಿಸಲು ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಜೂನ್ 13 ರಂದು ಬೆಳಿಗ್ಗೆ 8 ರಿಂದ ಸಂಜೆ 5 ವರೆಗೆ ಮತದಾನ ನಡೆಯಲಿದೆ. ಚುನಾವಣಾ ಕರ್ತವ್ಯಕ್ಕೆ 290 ಜನರನ್ನು ನಿಯೋಜಿಸಲಾಗಿದೆ. 48 ಆರೋಗ್ಯ ಸಿಬ್ಬಂದಿ, 48 ಮೈಕ್ರೋ ಆಬ್ಜರವರ ಹಾಗೂ 114 ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಎಂದು ತಿಳಿಸಿದರು.
ಪದವೀಧರ ಮತಕ್ಷೇತ್ರಕ್ಕೆ 24327 ಪುರುಷರು, 9322 ಮಹಿಳೆಯರು ಹಾಗೂ ಇತರೆ 2 ಸೇರಿ ಒಟ್ಟು 33651 ಮತದಾರರಿದ್ದಾರೆ. ಶಿಕ್ಷಕರ ಮತಕ್ಷೇತ್ರಕ್ಕೆ 3680 ಪುರುಷರು, 1493 ಮಹಿಳೆಯರು ಸೇರಿ ಒಟ್ಟು 5173 ಮತದಾರರಿದ್ದಾರೆ ಎಂದು ತಿಳಿಸಿದರು.
ಮತಗಟ್ಟೆಗಳ ವಿವರ:
ಜಿಲ್ಲೆಯಲ್ಲಿ ಒಟ್ಟು 32 ಮತಗಟ್ಟೆಗಳು ಹಾಗೂ ಹೆಚ್ಚುವರಿ 16 ಸೇರಿ 48 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ರಬಕವಿ-ಬನಹಟ್ಟಿ, ಜಮಖಂಡಿ ತಾಲೂಕಿನಲ್ಲಿ ತಲಾ 7, ಮುಧೋಳ, ಬದಾಮಿ ತಲಾ 6, ಬೀಳಗಿ 5, ಗುಳೇದಗುಡ್ಡ, ಹುನಗುಂದ ತಲಾ 2, ಇಲಕಲ್ಲ 2 ಹಾಗೂ ಬಾಗಲಕೋಟೆ ತಾಲೂಕಿನಲ್ಲಿ 10 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 11 ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 11 ಕಡೆ ವೆಬ್ ಕ್ಯಾಸ್ಟಿಂಗ್ ಹಾಗೂ 23 ಮತಗಟ್ಟೆಗಳಲ್ಲಿ ವಿಡಿಯೋಗ್ರಫಿ ಮಾಡಲಾಗುತ್ತಿದೆ ಎಂದು ತಿಳಿಸಿದರು.