ತಣ್ಣಗಿನ ವಾತಾವರಣದಲ್ಲಿ ಮಾತ್ರ ಬೆಳೆಯಲು ಸಾಧ್ಯವಾಗುವ ಬೆಳೆಯನ್ನು ನಮ್ಮ ರಣಬಿಸಿಲಿನಲ್ಲಿ ಬೆಳೆಯೋಕೆ ಸಾಧ್ಯವಾ? ಕಾಶ್ಮೀರದಂಥ ತಣ್ಣಗಿನ ವಾತಾವರಣದಲ್ಲಿ ಬೆಳೆಯುವ ಸೇಬು ಹಣ್ಣನ್ನು ಬಾಗಲಕೋಟೆಯ ರೈತರೊಬ್ಬರು ಬೆಳೆದಿದ್ದಾರೆ.
ಹೌದು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದ ರೈತ ಶ್ರೀಶೈಲ ತೇಲಿ ಸೇಬು ಬೆಳೆದು ಎಲ್ಲರಿಗೂ ಅಚ್ಚರಿಯಾಗುವಂತೆ ಮಾಡಿದ್ದಾರೆ. ಈ ಬಗ್ಗೆ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.
ಶ್ರೀಶೈಲ ತೇಲಿ ಅವರು ಸೇಬು ಬೆಳೆದ ರೀತಿ ಹಾಗೂ ಪರಿಶ್ರಮವನ್ನು ಕೊಂಡಾಡಿ ಮೋದಿ ಅವರು, ಮೊದಲೆಲ್ಲ ಶೀತವಲಯದಲ್ಲಿ ಸೇಬು ಬೆಳೆಯಲಾಗುತ್ತಿತ್ತು. ಆದರೆ, ಕರ್ನಾಟಕದ ಉಷ್ಣವಲಯದಲ್ಲೂ ಸೇಬು ಬೆಳೆದಿದ್ದು ಗಮನಾರ್ಹವಾಗಿದೆ. 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರುವ ಪ್ರದೇಶದಲ್ಲಿ ಸೇಬು ಬೆಳೆದು ಲಾಭ ಪಡೆದ ರೈತನ ಯಶೋಗಾಥೆ ಮಾದರಿ ಎಂದು ಹೇಳಿದರು.
ಶ್ರೀಶೈಲ ತೇಲಿ ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದವರು. ಕೆಲ ವರ್ಷ ಗಳ ಹಿಂದೆ ಕುಳಲಿ ಗ್ರಾಮದ ವ್ಯಾಪ್ತಿಯಲ್ಲಿ ಜಮೀನು ಖರೀದಿಸಿ ಸೇಬು ಕೃಷಿ ಮಾಡಿ ಭರ್ಜರಿ ಫಸಲು ತೆಗೆದಿದ್ದಾರೆ. 7 ಎಕರೆ ಜಮೀನಿನಲ್ಲಿ 2620 ಸಸಿ ನಾಟಿ ಮಾಡಿದ್ದು, ಸಸಿಗಳ ಆರೈಕೆಗೆ ಜೀವಾಮೃತ, ಸಾವಯವ ಗೊಬ್ಬರ ಬಳಕೆ ಮಾಡಿದ್ದಾರೆ.