ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಜನಪ್ರಿಯ ಎಜುಟೆಕ್ ಕಂಪನಿ ಬೈಜುಸ್ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದು, ಒಂದರ ಹಿಂದೆ ಒಂದರಂತೆ ಸಮಸ್ಯೆಗಳನ್ನು ಎದುರಿಸುತ್ತಿದೆ.
ಇದೀಗ ಬೈಜುಸ್ ಸಂಸ್ಥೆಯ ನಾಲ್ವರು ಹೂಡಿಕೆದಾರರು ಕಾನೂನು ಕ್ರಮಕ್ಕೆ ಮುಂದಾಗಿದ್ದು, ರಾಷ್ಟ್ರೀಯ ಕಂಪನಿ ಕಾನೂನು ಟ್ರಿಬ್ಯೂನಲ್ ನಲ್ಲಿ (ಎನ್ ಸಿಎಲ್ ಟಿ) ಈ ಎಜುಟೆಕ್ ಕಂಪನಿ ವಿರುದ್ಧ ದಬ್ಬಾಳಿಕೆ ಹಾಗೂ ಅವ್ಯವಸ್ಥೆಯ ದೂರು ದಾಖಲಿಸಿದ್ದಾರೆ.
ರಾಷ್ಟ್ರೀಯ ಕಂಪನಿ ಕಾನೂನು ಪ್ರಾಧಿಕಾರದ (ಎನ್ ಸಿಎಲ್ ಟಿ) ಮುಂದೆ ಹೂಡಿಕೆದಾರರು ಸಲ್ಲಿಸಿದ ಅರ್ಜಿಯಲ್ಲಿ ರವೀಂದ್ರನ್ ಹಾಗೂ ಅವರ ಕುಟುಂಬವನ್ನು ಬೈಜುಸ್ ಮಂಡಳಿಯಿಂದ ತೆಗೆಯುವಂತೆ ಒತ್ತಾಯಿಸಲಾಗಿದೆ. ಬೈಜುಸ್ ‘ಅವ್ಯವಸ್ಥೆ ಹಾಗೂ ವೈಫಲ್ಯ’ ಕೇಂದ್ರೀಕರಿಸಿ ಷೇರುದಾರರ ವಿಶೇಷ ಸಾಮಾನ್ಯ ಸಭೆಯಲ್ಲಿ ರವೀಂದ್ರನ್ ಹಾಗೂ ಅವರ ಕುಟುಂಬವನ್ನು ಮಂಡಳಿಯಿಂದ ವಜಾಗೊಳಿಸುವಂತೆ ಒತ್ತಾಯಿಸಿದ ಜೊತೆಗೆ ವ್ಯವಹಾರದ ಫಾರೆನ್ಸಿಕ್ ಅಡಿಟ್ ನಡೆಸುವಂತೆ ಕೂಡ ಆಗ್ರಹಿಸಲಾಗಿದೆ.
ದಾಖಲೆ ಪ್ರಕಾರ ಹೂಡಿಕೆದಾರರು ಹೊಸ ಸಿಇಒ ಹಾಗೂ ಮಂಡಳಿಯನ್ನು ಆಯ್ಕೆ ಮಾಡಲು ಬಯಸಿದ್ದರು. ಹಾಗೆಯೇ ಪ್ರಸ್ತುತವಿರುವ ಆಡಳಿತ ಮಂಡಳಿ ಉದ್ಯಮ ಮುನ್ನಡೆಸಲು ಅಸಮರ್ಥವಾಗಿದೆ ಎಂದು ಘೋಷಿಸುವಂತೆ ಒತ್ತಾಯಿಸಲಾಗಿದೆ. ಹಾಗೆಯೇ ಎನ್ ಸಿಎಲ್ ಟಿಗೆ ಸಲ್ಲಿಕೆ ಮಾಡಿರುವ ಮನವಿಯಲ್ಲಿ ಫಾರೆನ್ಸಿಕ್ ಅಡಿಟ್ ಗೆ ಒತ್ತಾಯಿಸಲಾಗಿದೆ. ಹೂಡಿಕೆದಾರರಿಗೆ ಆಡಳಿತ ಮಂಡಳಿ ಮಾಹಿತಿಗಳನ್ನು ಒದಗಿಸುವಂತೆ ಆದೇಶ ಹೊರಡಿಸುವಂತೆ ಕೂಡ ಕೋರಲಾಗಿದೆ.
ಈ ದೂರು ಅರ್ಜಿಗೆ ಪ್ರೊಸಸ್, ಜಿಎ, ಸೋಫಿನ ಹಾಗೂ ಪೀಕ್ XV ಎಂಬ ನಾಲ್ಕು ಹೂಡಿಕೆದಾರರು ಸಹಿ ಹಾಕಿದ್ದಾರೆ. ಇನ್ನು ಈ ಅರ್ಜಿಗೆ ಬೆಂಬಲ ನೀಡಿರುವ ಇತರರ ಷೇರುದಾರರಲ್ಲಿ ಟೈಗರ್ ಹಾಗೂ ಔಲ್ ವೆಂಚರ್ಸ್ ಸೇರಿದೆ.
ಈ ಕಾನೂನು ಅರ್ಜಿಯಲ್ಲಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಸಂಸ್ಥಾಪಕರ ಹಣಕಾಸಿನ ತಪ್ಪು ನಿರ್ವಹಣೆ ಸೇರಿದಂತೆ ಅನೇಕ ವಿಚಾರಗಳು ಆಕಾಶ್, ಬೈಜುಸ್ ಅಲ್ಫಾ ಮೇಲಿನ ಹಿಡಿತ ಕಳೆದುಕೊಳ್ಳುವಂತೆ ಆಡಿದೆ. ಈ ಎರಡೂ ಸಂಸ್ಥೆಗಳು ಸಾಲದ ಸುಳಿಯಲ್ಲಿ ಸಿಲುಕಿವೆ. ಇನ್ನು ಕಾರ್ಪೋರೇಟ್ ಆಡಳಿತಕ್ಕೆ ಸಂಬಂಧಿಸಿ ಈಗಿರುವ ಸಮಸ್ಯೆಗಳು ಅಂದ್ರೆ ಸ್ವತಂತ್ರ ನಿರ್ದೇಶಕರು ಹಾಗೂ ಸಿಫ್ಒ ನೇಮಕ ಮಾಡಿಕೊಳ್ಳುವಲ್ಲಿ ವೈಫಲ್ಯ ಅನೇಕ ಸಮಸ್ಯೆಗಳನ್ನು ಸೃಷ್ಟಿಸಿದೆ.
43 ವಯಸ್ಸಿನ ಬೈಜುಸ್ ಸ್ಥಾಪಕರ ವಿರುದ್ಧ ಜಾರಿ ನಿರ್ದೇಶನಾಲಯ ಲುಕ್ ಔಟ್ ಸರ್ಕ್ಯೂಲರ್ (ಎಲ್ ಒಸಿ) ಉನ್ನತೀಕರಿಸಿದೆ. ಈ ಬೆಳವಣಿಗೆಗಳು ರವೀಂದ್ರನ್ ಹಾಗೂ ಅವರ ಕುಟುಂಬವನ್ನು ಕಂಪನಿ ಆಡಳಿತ ಮಂಡಳಿಯಿಂದ ವಜಾಗೊಳಿಸಲು ಕರೆಯಲಾಗಿದ್ದ ಷೇರುದಾರರ ತುರ್ತು ಸಭೆಗೆ ತಡೆಯಾಜ್ಞೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ ಒಂದು ದಿನದ ಬಳಿಕ ನಡೆದಿವೆ.