ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಿ ಸಿಸಿಹೆಚ್ 57ನೇ ನ್ಯಾಯಾಲಯವು ಆದೇಶ ಹೊರಡಿಸಿದೆ.
ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಹಿರಿಯ ವಕೀಲ ಸಿಎನ್ ನಾಗೇಶ್ ಅವರು ಇಂದು ದರ್ಶನ್ ಪರ ವಾದ ಮಂಡಿಸಿದರು. ಕಳೆದ ಎರಡು ವಾರದಿಂದಲೂ ದರ್ಶನ್ಗೆ ಜಾಮೀನು ಅರ್ಜಿ ಮುಂದೂಡಿಕೆ ಆಗುತ್ತಲೇ ಬಂದಿದ್ದು, ಇಂದು ಕೊನೆಗೂ ಸಿವಿ ನಾಗೇಶ್ ಅವರು ದರ್ಶನ್ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ದಿನದ ಅಂತ್ಯಕ್ಕೆ ಪ್ರಕರಣದ ವಿಚಾರಣೆಯನ್ನು ನಾಳೆ (ಅಕ್ಟೋಬರ್ 05) ಮಧ್ಯಾಹ್ನ 12:30ಕ್ಕೆ ಮುಂದೂಡಿಕೆ ಮಾಡಲಾಯಿತು.
ಕೊನೆಯಲ್ಲಿ ರಿಕವರಿ ಮತ್ತು ಸ್ವಇಚ್ಚಾ ಹೇಳಿಕೆಯ ಸಂದೇಹ & ವ್ಯತ್ಯಾಸಗಳ ಬಗ್ಗೆ ಸಿ.ವಿ ನಾಗೇಶ್ ವಾದ ಮಂಡಿಸಿದರು. ಇಲ್ಲಿ ಪೊಲೀಸ್ ರಿಕವರಿ ಸ್ವೀಕರಿಸುವಂತಹದ್ದು ಅಲ್ಲ, ಹೇಳಿಕೆಯೂ ಸಹ ಸ್ವಿಕರಿಸುವಂತಹದ್ದಲ್ಲ. ಇಲ್ಲಿ ಸಮಾನ್ಯ ನಿಯಮವನ್ನು ಪೊಲೀಸರು ಅನುಸರಿಸಬೇಕು. ಸಾಕ್ಷಿಯೂ ಪ್ಲಾಂಟೆಂಡ್ ಸಾಕ್ಷಿಯಾಗಿದೆ. 37 ಲಕ್ಷ ಹಣವನ್ನು ಸೀಜ್ ಮಾಡಿದ್ದಾರೆ. ಸಾಕ್ಷಿಗಳ ಕೊಂಡುಕೊಳ್ಳಲು ಹಣ ಬೇಕು ಎಂದಿದ್ದಾರೆ ಎಂದು ಹೇಳಿ ನಾಳೆಗೆ ವಾದ ಮುಂದುವರಿಸುತ್ತೇನೆ ಎಂದು ಹೇಳಿದರು
ಇಂದು ಸಿವಿ ನಾಗೇಶ್ ಅವರು ದೀರ್ಘವಾಗಿ ವಾದ ಮಂಡನೆ ಮಾಡಿದರು. ಆರಂಭದಲ್ಲಿ ಮಾಧ್ಯಮಗಳ ವಿಚಾರ, ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ವಿರುದ್ಧ ಮಾಡಲಾದ ಆರೋಪಗಳ ಬಗ್ಗೆ ನ್ಯಾಯಾಲಯದ ಗಮನ ಸೆಳೆದ ವಕೀಲರು, ಮಾಧ್ಯಮಗಳ ವರದಿ ಆಧಾರದಲ್ಲಿ ತೀರ್ಪು ನೀಡಬಾರದೆಂದು ಮನವಿ ಮಾಡಿದರು. ಬಳಿಕ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿರುವ ವೈರುಧ್ಯಗಳ ಬಗ್ಗೆ ಗಮನ ಸೆಳೆದರು. ಜೊತೆಗೆ ಸುಪ್ರೀಂ ಕೋರ್ಟ್ನ ಕೆಲವು ತೀರ್ಪುಗಳನ್ನು ಉಲ್ಲೇಖಿಸಿ, ಪೊಲೀಸರು ತನಿಖೆಯ ವೇಳೆ ವಶಪಡಿಸಿಕೊಂಡಿರುವ ವಸ್ತುಗಳನ್ನು ಗಂಭೀರವಾಗಿ ಅಂದರೆ ಸಾಕ್ಷಿಗಳೆಂದು ಪರಿಗಣಿಸುವ ಅಗತ್ಯವಿಲ್ಲವೆಂದು ವಾದಿಸಿದರು.
ಇದಕ್ಕೆ ಜಡ್ಜ್ ಎಸ್‌ಪಿಪಿ ನೀವು ವಾದ ಮಾಡ್ತೀರಾ ಎಂದು ಪ್ರಶ್ನೆ ಮಾಡಿದರು, ಜಡ್ಜ್ ಪ್ರಶ್ನೆಗೆ ಉತ್ತರಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್, ಎಲ್ಲರದ್ದೂ ಮುಗಿದ ಮೇಲೆ ನಾನು ವಾದ ಮಾಡ್ತೀನಿ ಎಂದರು. ನಂತರ ಜಡ್ಜ್ ಶನಿವಾರ ಮಧ್ಯಾಹ್ನ 12:30ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿ ಆದೇಶಿಸಿದರು.