ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್‌ಸ್ಟಾಗ್ರಾಂನಲ್ಲಿ ಕಂಡ ಹೂಡಿಕೆ ಜಾಹೀರಾತಿನ ಆಮಿಷಕ್ಕೆ ಒಳಗಾದ ನಗರದ ಉದ್ಯಮಿಯೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ 7.84 ಲಕ್ಷ ರೂಪಾಯಿ ವಂಚಿಸಿದ್ದಾರೆ. ಸಣ್ಣ ಮೊತ್ತದ ‘ಲಾಭಾಂಶ’ವನ್ನು ಪ್ರತಿದಿನ ಅಕೌಂಟ್‌ಗೆ ಜಮೆ ಮಾಡಿ ವಿಶ್ವಾಸ ಗಳಿಸಿ ಬಳಿಕ ದೊಡ್ಡ ಮೊತ್ತವನ್ನು ಲಪಟಾಯಿಸಿರುವ ವಂಚನೆಯ ಹೊಸ ಜಾಲ ಬೆಳಕಿಗೆ ಬಂದಿದೆ.
ವಂಚನೆ ನಡೆದಿದ್ದು ಹೇಗೆ?
ಅಧಿಕ ಲಾಭ ಗಳಿಸುವ ಆಸೆಯಿಂದ, ಶಿವಮೊಗ್ಗದ ಉದ್ಯಮಿಯು ಇನ್‌ಸ್ಟಾಗ್ರಾಂನಲ್ಲಿ ಬಂದ ಹಣ ಹೂಡಿಕೆ ಜಾಹೀರಾತು ನಂಬಿ ಮೊದಲು 20,000 ರೂ. ಹೂಡಿಕೆ ಮಾಡಿದ್ದರು. ಈ ಹೂಡಿಕೆ ಮಾಡಿದ ನಂತರ, ಸೈಬರ್ ವಂಚಕರು ಉದ್ಯಮಿಯ ಖಾತೆಗೆ ಸುಮಾರು 60 ದಿನಗಳ ಕಾಲ ಪ್ರತಿದಿನ 200 ರೂ. ‘ಲಾಭಾಂಶ’ದ ರೂಪದಲ್ಲಿ ಜಮಾ ಮಾಡಿದ್ದಾರೆ.
ಇದೇ ವಿಶ್ವಾಸವನ್ನು ಬಂಡವಾಳ ಮಾಡಿಕೊಂಡ ವಂಚಕರು, “ಮತ್ತಷ್ಟು ಹಣ ಹೂಡಿಕೆ ಮಾಡಿದರೆ ಇನ್ನೂ ಹೆಚ್ಚಿನ ಲಾಭ ಗಳಿಸಬಹುದು” ಎಂದು ಉದ್ಯಮಿಗೆ ಪ್ರಚೋದನೆ ನೀಡಿದ್ದಾರೆ. ಇದನ್ನು ನಂಬಿದ ಉದ್ಯಮಿ, ತನ್ನ ಮತ್ತು ಕುಟುಂಬದ ಸದಸ್ಯರ ಹೆಸರಿನಲ್ಲಿ ಒಟ್ಟಾಗಿ 7.84 ಲಕ್ಷ ರೂ.ಗಳ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ.
ಆದರೆ, ಈ ಹೂಡಿಕೆಯ ನಂತರ ಯಾವುದೇ ಲಾಭಾಂಶ ಬರದಿರುವ ಕಾರಣ ಉದ್ಯಮಿ ಪರಿಶೀಲಿಸಿದಾಗ, ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ಸಿ.ಇ.ಎನ್. (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕರು ಇಂತಹ ಆನ್‌ಲೈನ್ ಆಮಿಷಗಳಿಂದ ಎಚ್ಚರವಾಗಿರುವಂತೆ ಪೊಲೀಸರು ಸೂಚಿಸಿದ್ದಾರೆ.