ಹೊಸದಿಗಂತ ಡಿಜಿಟಲ್ ಡೆಸ್ಕ್:
ಆತ್ಮಾಹತ್ಯಾ ಬಾಂಬ್ ದಾಳಿಯಲ್ಲಿ 52ಜನ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದಿದೆ. ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಆಚರಿಸಲು ನಡೆಯುತ್ತಿದ್ದ ರ್ಯಾಲಿ ವೇಳೆ ಆತ್ಮಹತ್ಯಾ ಸ್ಫೋಟ ಸಂಭವಿಸಿದ್ದು, 52ಜನ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮಸ್ತುಂಗ್ ಜಿಲ್ಲೆಯ ಮದೀನಾ ಮಸೀದಿ ಬಳಿ ಸ್ಫೋಟ ಸಂಭವಿಸಿದೆ. ಈ ರ‍್ಯಾಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಸ್ತುಂಗ್ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ನವಾಜ್ ಗಶ್ಕೋರಿ ಕೂಡ ಅಸುನೀಗಿದ್ದಾರೆ. ಇಂದು ಮಧ್ಯಾಹ್ನ ಮದೀನಾ ಮಸೀದಿಯಲ್ಲಿ ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಮೀಲಾದ್ ಉನ್ ನಬಿಯನ್ನು ಆಚರಿಸಲು ಬೃಹತ್ ರ್ಯಾಲಿ ನಡೆಯಿತು. ಈ ರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು. ಆ ವೇಳೆ ಭಾರಿ ಸ್ಫೋಟ ಸಂಭವಿಸಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಆತ್ಮಹತ್ಯಾ ಬಾಂಬರ್ ಡಿಎಸ್ಪಿ ಕಾರಿನ ಪಕ್ಕದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ನಗರ ಠಾಣಾಧಿಕಾರಿ ಮೊಹಮ್ಮದ್ ಜಾವೇದ್ ಲೆಹ್ರಿ ತಿಳಿಸಿದ್ದಾರೆ. ಇದು ಆತ್ಮಹತ್ಯಾ ದಾಳಿ ಎಂದು ಪ್ರಾಥಮಿಕವಾಗಿ ದೃಢಪಟ್ಟಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರವಾಗಿ ಗಾಯಗೊಂಡವರನ್ನು ಕ್ವೆಟ್ಟಾಕ್ಕೆ ಸ್ಥಳಾಂತರಿಸಲಾಗಿದೆ ಮತ್ತು ಎಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಯನ್ನು ವಿಧಿಸಲಾಗಿದೆ ಎಂದು ಬಲೂಚಿಸ್ತಾನ್ ಹಂಗಾಮಿ ಮಾಹಿತಿ ಸಚಿವ ಜಾನ್ ಅಚಕ್ಝೈ ಹೇಳಿದ್ದಾರೆ. ಬಾಂಬ್ ಸ್ಫೋಟದಿಂದಾಗಿ ಪ್ರದೇಶವೆಲ್ಲಾ ರಕ್ತಸಿಕ್ತವಾಗಿದೆ.
Over 15 killed and 70 injured in bomb blast at Mastung of Balochistan. https://t.co/VNetMvPfZC
— Aditya Raj Kaul (@AdityaRajKaul) September 29, 2023