ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಭಾರತಕ್ಕೆ ಆಗಮಿಸಿದ ಸಮಯ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ನಿಷೇಧ ವಿಧಿಸಿದ ಕ್ರಮದ ವಿರುದ್ಧ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳು ಕೇಂದ್ರ ಸರಕಾರ ವಿರುದ್ಧ ಮುಗಿಬಿದ್ದಿದ್ದು, ಇದರ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ನಮ್ಮದು ಯಾವುದೇ ಪಾತ್ರವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಈ ಕುರಿತು ಸ್ಪಷ್ಟನೆ ಬಿಡುಗಡೆ ಮಾಡಿರುವ ವಿದೇಶಾಂಗ ಸಚಿವಾಲಯ, ಅಫ್ಘಾನ್ ವಿದೇಶಾಂಗ ಸಚಿವರು ದೆಹಲಿಯಲ್ಲಿ ನಡೆಸಿದ ಮಾಧ್ಯಮ ಸಂವಾದದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಯಾವುದೇ ಪಾತ್ರವಿಲ್ಲ ಎಂದು ಹೇಳಿದೆ.
ತಾಲಿಬಾನ್ ಸಚಿವರು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಕೇವಲ ಪುರುಷ ಪತ್ರಕರ್ತರು ಉಪಸ್ಥಿತರಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಈ ಘಟನೆಯನ್ನು ತರಾಟೆಗೆ ತೆಗೆದುಕೊಂಡಿದ್ದ ರಾಹುಲ್ ಗಾಂಧಿ, ಮೋದಿಯವರೆ, ಸಾರ್ವಜನಿಕ ವೇದಿಕೆಯಿಂದ ಮಹಿಳಾ ಪತ್ರಕರ್ತರನ್ನ ಹೊರಗಿಡಲು ಅವಕಾಶ ನೀಡುವ ಮೂಲಕ, ನಾನು ನಿಮ್ಮ ಬೆಂಬಲಕ್ಕೆ ನಿಲ್ಲಲಾರದಷ್ಟು ದುರ್ಬಲನಾಗಿದ್ದೇನೆ ಎಂಬ ಸಂದೇಶವನ್ನು ಭಾರತೀಯ ಮಹಿಳೆಯರಿಗೆ ರವಾನಿಸಿದ್ದೀರಿ ಎಂದು ಟೀಕಿಸಿದ್ದಾರೆ.