ಆಯುಧ ಪೂಜೆಯಲ್ಲಿ ಅರಿಶಿಣ, ಕುಂಕುಮ, ರಂಗೋಲಿ ನಿಷೇಧ: ರಾಜ್ಯ ಸರಕಾರ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಸರಾದಲ್ಲಿ ಆಯುಧ ಪೂಜೆ ಸಮಯದಲ್ಲಿ ಕುಂಬಳಕಾಯಿಯ ಒಳಗೆ ಹಾಗೂ ರಂಗೋಲಿಯಲ್ಲಿ ರಾಸಾಯನಿಕಯುಕ್ತ ಬಣ್ಣಗಳು, ಅರಿಶಿಣ, ಕುಂಕುಮ ಹಾಗೂ ಸುಣ್ಣ ಇತ್ಯಾದಿಗಳನ್ನು ಬಳಸುವಂತಿಲ್ಲ ಎಂದು ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ.

ಆಯುಧ ಪೂಜೆ ಯಲ್ಲಿ ಕುಂಬಳಕಾಯಿ ಒಡೆದು ಅದರಲ್ಲಿ ಅರಿಶಿಣ, ಕುಂಕುಮ, ಸುಣ್ಣ ಹಾಗೂ ಇತರೆ ಬಣ್ಣವನ್ನು ಹಾಕುವುದು ನಮ್ಮ ಸಂಪ್ರದಾಯವಾಗಿದೆ. ಇನ್ನು ರಂಗೋಲಿ ಹಾಕುವುದು ಕೂಡ ನಮ್ಮ ಸಂಪ್ರದಾಯವಾಗಿದ್ದು, ಬಣ್ಣ ಬಣ್ಣದ ರಂಗೋಲು ಹಾಕುವುದಕ್ಕೂ ಸರ್ಕಾರ ನಿಷೇಧವನ್ನು ಹೇರಿದೆ.

ವಿಧಾನಸೌಧ ವಿಕಾಸಸೌಧ ಬಹುಮಹಡಿ ಕಟ್ಟಡಗಳಲ್ಲಿ ಆಯುಧ ಪೂಜೆ ಸಮಯದಲ್ಲಿ ಕಚೇರಿಗಳ ಒಳಗೆ ಮತ್ತು ಕಾರಿಡಾರ್‌ಗಳಲ್ಲಿ ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ಬಳಸುವುದರಿಂದ ಹಾನಿಕಾರಕವಾಗಿರುತ್ತದೆ. ಜೊತೆಗೆ, ಈ ರಾಸಾಯನಿಕ ಬಣ್ಣವು ನೆಲಹಾಸುವಿನ ಮೇಲೆ ಬಿದ್ದು ಸುಮಾರು ತಿಂಗಳುಗಳ ಕಾಲ ಹಾಗೆಯೇ ನೆಲಹಾಸುವಿನ ಮೇಲೆ ಅಂಟಿಕೊಂಡು ಉಳಿಯುತ್ತದೆ. ಇದರಿಂದ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡದ ನೆಲಹಾಸುಗಳ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತದೆ. ಈ ಕುರಿತಂತೆ, ಹಿಂದಿನ ಸಾಲುಗಳಲ್ಲಿಯೂ ಸಹ ಅನೇಕ ಸುತ್ತೋಲೆಗಳನ್ನು ಹೊರಡಿಸಿದ್ದಾಗ್ಯೂ, ಕೆಲವು ಇಲಾಖೆ/ಶಾಖೆಗಳಲ್ಲಿ ಈ ಸೂಚನೆಗಳನ್ನು ಪಾಲನೆ ಮಾಡದಿರುವುದು ವಿಷಾದನೀಯವಾಗಿದೆ. ಆದುದರಿಂದ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ 2023ರ ಅಕ್ಟೋಬರ್ ಮಾಹೆಯಲ್ಲಿ ಆಯುಧ ಪೂಜೆ ನೆರವೇರಿಸುವಾಗ ಕಚೇರಿಯ ಒಳಗೆ ಕಾರಿಡಾರ್‌ಗಳಲ್ಲಿ ಕುಂಬಳಕಾಯಿ ಮತ್ತು ರಂಗೋಲಿಗಳಲ್ಲಿ ಯಾವುದೇ ರೀತಿಯ ರಾಸಾಯನಿಕ ಮಿಶ್ರಿತ ಬಣ್ಣ/ಕುಂಕುಮ/ಅರಿಠಿನ/ಸುಣ್ಣ ಹಾಗೂ ಇನ್ನಿತರ ವಸ್ತುಗಳನ್ನು ಕಡ್ಡಾಯವಾಗಿ ಬಳಸದಂತೆ ಈ ಮೂಲಕ ತಿಳಿಸಲಾಗಿದೆ. ಮುಂದುವರೆದು, ಪೂಜಾ ದಿನದಂದು ಕಛೇರಿಯಿಂದ ಹೊರಡುವ ಮುನ್ನ ದೀಪಗಳನ್ನು ಹಾಗೂ ವಿದ್ಯುತ್‌ ಸ್ವಿಚ್‌ಗಳನ್ನು ನಂದಿಸಿ ತೆರಳುವಂತೆ ಸೂಚಿಸಲಾಗಿದೆ. ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ವ್ಯವಸ್ಥಿತವಾಗಿ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ.

ಪಾರಂಪರಿಕ ಕಟ್ಟಡಗಳ ಸೌಂದರ್ಯವನ್ನು ಕಾಪಾಡುವುದು ಪ್ರತಿಯೊಬ್ಬ ಅಧಿಕಾರಿ/ನೌಕರರ ಆದ ಕರ್ತವ್ಯವಾಗಿದ್ದು, ಮೇಲೆ ತಿಳಿಸಲಾದ ಸೂಚನೆಗಳನ್ನು ಸ್ವಪ್ರೇರಿತರಾಗಿ ಪಾಲಿಸುವ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದು ಸೂಕ್ತವಾಗಿರುತ್ತದೆ. ಆದಾಗ್ಯೂ ಸ್ಪಂದಿಸದಿದ್ದಲ್ಲಿ, ಸಂಬಂಧಪಟ್ಟ ಇಲಾಖೆ/ಶಾಖೆಯವರ ಮೇಲೆ ಅನಿವಾರ್ಯವಾಗಿ ಜವಾಬ್ದಾರಿಯನ್ನು ನಿಗಧಿಪಡಿಸಬೇಕಾಗುತ್ತದೆಂದು ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!