ಜನರಿಂದ ಬೇಡಿಕೆ ಬಂದರೆ ‘ಆದಿಪುರುಷ್ ‘ ಸಿನಿಮಾ ಬ್ಯಾನ್: ಚತ್ತೀಸ್​ಘಡ ಸಿಎಂ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಆದಿಪುರುಷ್ ಸಿನಿಮಾದ ಸಂಕಷ್ಟಗಳು ಅಂತ್ಯವಾಗುತ್ತಲೇ ಇಲ್ಲ, ಬದಲಿಗೆ ದಿನಕ್ಕೊಂದು ಹೊಸ ಸಂಕಷ್ಟಗಳು ಪೋಣಿಸಿಕೊಳ್ಳುತ್ತಲೇ ಸಾಗುತ್ತಿವೆ. ಶ್ರೀರಾಮ, ರಾವಣ ಇನ್ನಿತರೆ ಪಾತ್ರಗಳ ವಸ್ತ್ರ ವಿನ್ಯಾಸ, ಪಾತ್ರಗಳ ಮೂಲ ವ್ಯಕ್ತಿತ್ವವನ್ನು ತಿರುಚಿರುವ ರೀತಿಯ ಬಗ್ಗೆ ಆಕ್ಷೇಪಿಸಿದ್ದಾರೆ. ಹಿಂದೂ ಸೇನಾ ಸಂಘಟನೆಯು ದೆಹಲಿ ಹೈಕೋರ್ಟ್​ಗೆ ಆದಿಪುರುಷ್ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಈ ಸಿನಿಮಾವು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದಿದೆ. ಇದರ ಬೆನ್ನಲ್ಲೆ ಇದೀಗ ಚತ್ತೀಸ್​ಘಡ ಸಿಎಂ ಸಹ ಸಿನಿಮಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ರಾಜ್ಯದಲ್ಲಿ ಸಿನಿಮಾವನ್ನು ಬ್ಯಾನ್ ಮಾಡಲು ಸಿದ್ಧ ಎಂದಿದ್ದಾರೆ.

ಆದಿಪುರುಷ್ ಸಿನಿಮಾ ಬಗ್ಗೆ ಮಾತನಾಡಿದ ಚತ್ತೀಸ್​ಘಡ ಸಿಎಂ ಭೂಪೇಶ್ ಭಗೇಲ, ನಮ್ಮ ಆರಾಧ್ಯ ದೈವಗಳ ಚಿತ್ರಣವನ್ನೇ ಬದಲು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಶ್ರೀರಾಮ ಹಾಗೂ ಹನುಮಂತ ಅವರ ಮೂಲ ಭಾವ ಭಕ್ತಿ, ಸೌಮ್ಯತೆ ಆದರೆ ಶ್ರೀರಾಮರನ್ನು ಯೋಧನನ್ನಾಗಿ, ಹನುಮಂತನನ್ನು ಆಂಗ್ರಿ ಬರ್ಡ್​ ರೀತಿಯಲ್ಲಿ ಆದಿಪುರುಷ್ ಸಿನಿಮಾದಲ್ಲಿ ತೋರಿಸಲಾಗಿದೆ, ಅಲ್ಲದೆ ಸಿನಿಮಾದಲ್ಲಿ ಬಳಸಲಾಗಿರುವ ಭಾಷೆಯು ಸರಿಯಿಲ್ಲ ಎಂದು ಆಕ್ಷೇಪಣೆ ಎತ್ತಿದ್ದಾರೆ.

”ಹನುಮಂತನ ಪಾತ್ರದ ಮೂಲಕ ಹೇಳಿಸಿರುವ ಸಂಭಾಷಣೆಗಳು ಗೌರವಪೂರ್ವಕವಾಗಿಲ್ಲ. ಅಲ್ಲದೆ ಅರಬಿ, ಪಾರ್ಸಿ ಶಬ್ದಗಳ ಬಳಕೆಯನ್ನೂ ಸಹ ಕೆಲವು ಸಂಭಾಷಣೆಗಳಲ್ಲಿ ಮಾಡಲಾಗಿದೆ. ಈಗಿನ ಕಾಲದ ಮಕ್ಕಳು ಈ ಸಿನಿಮಾ ನೋಡಿದರೆ ರಾಮಾಯಣದ ಕುರಿತಂತೆ ಅವರಿಗೆ ಯಾವ ರೀತಿಯ ಅಭಿಪ್ರಾಯ ಮೂಡಬಹುದು” ಎಂದು ಚತ್ತೀಸ್​ಘಡ ಸಿಎಂ ಭೂಪೇಶ್ ಭಗೇಲ ಆತಂಕ ವ್ಯಕ್ತಪಡಿಸಿದ್ದಾರೆ.

ಚತ್ತೀಸ್​ಘಡದಲ್ಲಿ ಆದಿಪುರುಷ್ ಸಿನಿಮಾ ಬ್ಯಾನ್ ಆಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಭೂಪೇಶ್ ಭಗೇಲ, ಜನ ಈಗ ಸಿನಿಮಾ ನೋಡುತ್ತಿದ್ದಾರೆ. ಒಂದೊಮ್ಮೆ ಜನರಿಂದ ಬೇಡಿಕೆ ಬಂದರೆ ಖಂಡಿತ ಆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!