ಹೊಸದಿಗಂತ ಬಳ್ಳಾರಿ:
ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್. ಬಸವರೆಡ್ಡಿ ಅವರೊಂದಿಗೆ ಆಸ್ಪತ್ರೆಯ ಐಸಿಯು, ಹೆರಿಗೆ ವಾರ್ಡ್, ಔಷಧಿ ಉಗ್ರಾಣ, ಜನರಲ್ ವಾರ್ಡ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆರಿಗೆ ವಾರ್ಡ್ ತೆರಳಿ ಬಾಣಂತಿಯರ ಆರೋಗ್ಯ, ಮಗುವಿನ ಆರೋಗ್ಯದ ಕುರಿತು ವಿಚಾರಿಸಿದರು. ನಂತರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್. ಬಸರೆಡ್ಡಿ ಅವರಿಂದ ಸಾವು ಸಂಭವಿಸಿದ ಪ್ರಕರಣಗಳ ಕುರಿತು ಕೆಲ ಕಾಲ ಕಚೇರಿಯಲ್ಲಿ ಚರ್ಚಿಸಿ ಮಾಹಿತಿ ಪಡೆದರು. ನಂತರ ತಾಲೂಕಿನ ಬಸರಕೋಡ ಗ್ರಾಮಕ್ಕೆ ತೆರಳಿ ಮೃತಪಟ್ಟ ಬಾಣಂತಿ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಾಣಂತಿಯರ ಸರಣಿ ಸಾವಿನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪು ಯಾರದ್ದೇ ಇರಲಿ ಮುಲಾಜಿಲ್ಲದೇ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು, ಈ ವಿಚಾರದಲ್ಲಿ ನಿರ್ಲಕ್ಷ್ಯ ಎನ್ನುವ ಮಾತೇ ಇಲ್ಲ, ಇದು ಜನರ ಜೀವನದ ಪ್ರಶ್ನೆ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಲಾಗುವುದು. ಮೃತಪಟ್ಟ ಬಾಣಂತಿಯರ ಕುಟುಂಬಕ್ಕೆ ಪರಿಹಾರ ಹೆಚ್ಚಿಸುವ ಕುರಿತು ಚರ್ಚಿಸಲಾಗುವುದು, ನಮ್ಮ ಸರ್ಕಾರ ಬಡವರ ಪರವಾಗಿದೆ, ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ನಿರ್ಲಕ್ಷ್ಯ ಎನ್ನುವ ಮಾತೇ ಇಲ್ಲ ಎಂದರು.
ಐವಿ ದ್ರಾವಣ ಬಳಕೆಯಿಂದ ಈ ಘಟನೆ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆ ಕೂಡಲೇ ಎಲ್ಲ ಕಡೆ ಇದರ ಬಳಕೆಯನ್ನು ನಿರ್ಭಂಧ ವಿಧಿಸಲಾಗಿದೆ. ಮೃತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿರುವೆ, ಯಾವುದೇ ಕಾರಣಕ್ಕೂ ಭಯ ಬೇಡ, ಸರಕಾರ ನಿಮ್ಮೊಂದಿಗೆ ಇದೆ ಎಂದು ಭರವಸೆ ನೀಡಿರುವೆ, ತಪ್ಪು ಯಾರೆ ಮಾಡಿರಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರದ ಶಾಸಕ ನಾರಾ ಭರತ್ ರೆಡ್ಡಿ, ಕಂಪ್ಲಿ ಶಾಸಕ ಜೇ.ಎನ್.ಗಣೇಶ್, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಮೇಯರ ಮುಲ್ಲಂಗಿ ನಂದೀಶ್, ಡಿಸಿ ಪ್ರಶಾಂತ್ ಕುಮಾರ್ ಮಿಶ್ರ ಸೇರಿದಂತೆ ಇತರರು ಇದ್ದರು.