ಹೊಸದಿಗಂತ ವರದಿ,ಬನವಾಸಿ:
ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ವೈಭವವನ್ನು ಪರಿಚಯಿಸುವಂತಹ ಕದಂಬೋತ್ಸವ ಸ್ತಬ್ಧಚಿತ್ರ ಮೆರವಣಿಗೆಗೆ ಜ್ಯೋತಿ ಬೆಳಗಿಸಿ, ತಮಟೆ ಬಾರಿಸುವ ಮೂಲಕ ಶನಿವಾರ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರೀಯಾ ಚಾಲನೆ ನೀಡಿದರು.
ಶಾಲಾ ವಿದ್ಯಾರ್ಥಿಗಳಿಂದ ಕುಂಭಮೇಳ, ಭಾರತ ಸೇವದಳ, ಸ್ಕೌಟ್ಸ್ ಮತ್ತು ಗೈಡ್ ಸಮವಸ್ತ್ರದೊಂದಿಗೆ ಆಕರ್ಷಕ ಪಥ ಸಂಚಲನ, ಶಾಲಾ ಕಾಲೇಜುಗಳ, ವಿವಿಧ ಇಲಾಖೆಗಳಿಂದ ನಿರ್ಮಿಸಿದ್ದ ಸ್ತಬ್ಧ ಚಿತ್ರಗಳು ಅತ್ಯಾಕರ್ಷಕ ಚಂಡೆ, ತಮಟೆ, ಜಗ್ಗಲಗಿ ವಾದ್ಯ ಮೇಳಗಳ ತಂಡಗಳೊಂದಿಗೆ ಮೆರವಣಿಗೆಯನ್ನು ಪ್ರಾರಂಭಿಸಲಾಯಿತು. ಮೆರವಣಿಗೆಯಲ್ಲಿ ರಾಜ ಮಹಾರಾಜರ ವೇಷಭೂಷಣಗಳು, ಜಗ್ಗಲಗಿ ಕುಣಿತ, ಸೋಮನಕುಣಿತ, ಡಕ್ಕೆ ಕುಣಿತ, ಸಿದ್ದರ ಕುಣಿತ, ಗೌಳಿ ಕುಣಿತ, ವೀರಗಾಸೆ, ಲಮಾಣಿ ನೃತ್ಯ, ಕಲಾಮೇಳ, ತೆಕ್ಕೆ ಕುಣಿತ, ಬೇಡರ ವೇಷ, ಸೇರಿದಂತೆ ಇನ್ನಿತರ ಕಲಾ ತಂಡಗಳು ಮೆರವಣಿಗೆಗೆ ಭವ್ಯ ಆಕರ್ಷಣೆ ನೀಡಿದವು.
ಮೆರವಣಿಗೆಯು ಮಧುಕೇಶ್ವರ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡು ಪಂಪ ವೃತ್ತದ ಮೂಲಕ ಸಾಗಿ ಕದಂಬೋತ್ಸವ ಮೈದಾನದಲ್ಲಿ ಮುಕ್ತಾಯಗೊಂಡಿತು.
ಮೆರವಣಿಗೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ, ಅಪರ ಜಿಲ್ಲಾಧಿಕಾರಿ ಸಾಜೀದ್ ಅಹ್ಮದ್ ಮುಲ್ಲಾ, ಸಹಾಯಕ ಆಯುಕ್ತೆ ಕೆ.ವಿ.ಕಾವ್ಯರಾಣಿ, ತಹಶೀಲ್ದಾರ ಶೈಲೇಶ ಪರಮಾನಂದ, ಗ್ರೇಡ್ 2 ತಹಶೀಲ್ದಾರ ರಮೇಶ ಹೆಗಡೆ, ತಾಪಂ ಇಒ ಸತೀಶ್ ಹೆಗಡೆ, ಗ್ರಾಪಂ ಅಧ್ಯಕ್ಷೆ ಬಿಬಿ ಆಯಿಷಾ ಖಾಸಿಂ ಖಾನ್, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಪಂ ಸದಸ್ಯರು, ಸಾರ್ವಜನಿಕರು ಇದ್ದರು.