ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಜೂನ್ 26ರಿಂದ ಆರಂಭವಾಗಲಿರುವ ಬೆಂಗಳೂರು-ಧಾರವಾಡ (Bengaluru-Dharwad) ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲಿನ ಪ್ರಯೋಗಾರ್ಥ ಸಂಚಾರ ಇಂದು ಯಶಸ್ವಿಯಾಗಿದೆ.
ಬೆಂಗಳೂರಿನಿಂದ ಬೆಳಿಗ್ಗೆ 5:45ಕ್ಕೆಹೊರಟ ರೈಲು ಮಧ್ಯಾಹ್ನ 12:40ಕ್ಕೆ ಧಾರವಾಡ ತಲುಪಿದೆ. ಬಳಿಕ ಧಾರವಾಡಕ್ಕೆ ಬರುತ್ತಿದ್ದಂತೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ರೈಲು ಬೆಳಿಗ್ಗೆ 5:45 ಕ್ಕೆ ಬೆಂಗಳೂರು ಬಿಟ್ಟಿತ್ತು. ತಾಂತ್ರಿಕ ತಂಡ ಹಾಗೂ ಅಧಿಕಾರಿಗಳು ರೈಲಿನಲ್ಲಿದ್ದರು. ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ಎಲ್ಲ ಬಗೆಯ ಪರೀಕ್ಷೆಗಳು ಯಶಸ್ವಿಯಾಗಿವೆ.
ಈ ಕುರಿತು ಮಾಹಿತಿ ನೀಡಿದ ನೈರುತ್ಯ ರೇಲ್ವೆಯ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್, ಇತ್ತೀಚಿಗಷ್ಟೇ ಧಾರವಾಡ-ಬೆಂಗಳೂರು ಮಧ್ಯೆ ಎಲೆಕ್ಟ್ರಿಕಲ್ ಲೈನ್ ಎಳೆಯಲಾಗಿತ್ತು. ಇದರ ಪರೀಕ್ಷೆಯನ್ನು ಮಾಡಲಾಗಿದೆ. ಎಲ್ಲವೂ ಯಶಸ್ವಿಯಾಗಿವೆ ಎಂದರು.
ಜೂನ್ 26ಕ್ಕೆ ಪ್ರಧಾನಿ ಮೋದಿಯಿಂದ ಚಾಲನೆ
ಜೂನ್ 26 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಸೂಪರ್-ಫಾಸ್ಟ್ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಕರ್ನಾಟಕಕ್ಕೆ ಎರಡನೇ ಹಂತದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪಾದಾರ್ಪಣೆ ಮಾಡಿದಂತಾಗುತ್ತದೆ.