February 6, 2026
Friday, February 6, 2026
spot_img

ಬೆಂಗಳೂರು ಚಲನಚಿತ್ರೋತ್ಸವ ಮುಕ್ತಾಯ: ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದ ಲಾಸ್ಟ್‌ ಲ್ಯಾಂಡ್‌, ಸಬರ್ ಬೊಂದಾ, ವನ್ಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಶುಕ್ರವಾರ ಅಂತ್ಯಗೊಂಡಿದ್ದು, ಜಪಾನ್‌ ದೇಶದದ ʼಲಾಸ್ಟ್‌ ಲ್ಯಾಂಡ್‌ʼ , ಮರಾಠಿಯ ʼಸಬರ್‌ ಬೊಂಡ್‌ʼ ಮತ್ತು ʼವನ್ಯಾʼ ಚಿತ್ರಗಳು ಚಿತ್ರೋತ್ಸವದ ಏಷ್ಯಾ, ಭಾರತ ಮತ್ತು ಕನ್ನಡ ವಿಭಾಗಗಳಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿವೆ.

‘ಅತ್ಯುತ್ತಮ ಸಿನಿಮಾ’ ಪ್ರಶಸ್ತಿ ವಿಜೇತರಿಗೆ ಪಾರಿತೋಷಕದ ಜೊತೆಗೆ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಯಿತು. ದ್ವಿತೀಯ ಮತ್ತು ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ಗೆದ್ದವರಿಗೆ ತಲಾ ಐದು ಲಕ್ಷ ರೂ. ಮತ್ತು ಎರಡು ಲಕ್ಷ ರೂ. ನೀಡಿ ಗೌರವಿಸಲಾಯಿತು.

ಏಷ್ಯನ್‌ ಚಿತ್ರ ವಿಭಾಗದಲ್ಲಿ ಜಪಾನ್‌ನ ‘ಲಾಸ್ಟ್‌ ಲ್ಯಾಂಡ್‌’ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಪಾತ್ರವಾಗಿದೆ. ಭಾರತದ ʼಶೇಪ್‌ ಆಫ್‌ ಮೋಮೋʼ ಮತ್ತು ಜಪಾನ್‌ನ ʼದಿ ಡೀಪೆಸ್ಟ್‌ ಸ್ಪೇಸ್‌ ಇನ್‌ ಯೂಎಸ್‌ʼ ಚಿತ್ರಗಳು ದ್ವಿತೀಯ ಮತ್ತು ತೃತೀಯ ಚಿತ್ರ ಪ್ರಶಸ್ತಿಗೆ ಭಾಜನವಾಗಿವೆ.

ಭಾರತೀಯ (ಚಿತ್ರಭಾರತಿ) ವಿಭಾಗದಲ್ಲಿ ಮರಾಠಿ ಚಿತ್ರ ʼಸಬರ್‌ ಬೊಂಡ್‌ʼ ಅತ್ಯುತ್ತಮ ಚಿತ್ರ ಪ್ರಶಸ್ತಿ ತನ್ನದಾಗಿಸಿಕೊಂಡರೆ, ಮಲಯಾಳಂನ ʼಮೋಹಂʼ ಮತ್ತು ʼಕಾಡುʼ ಚಿತ್ರಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಚಿತ್ರ ಪ್ರಶಸ್ತಿಗಳನ್ನು ಗೆದ್ದಿವೆ. ಮರಾಠಿ ಭಾಷೆಯ ʼಗೊಂದಾಳ್‌ʼ ಚಿತ್ರವು ಫಿಪ್ರೆಸ್ಕಿ ಪ್ರಶಸ್ತಿ ಪಡೆದರೆ, ಮಲಯಾಳಂ ಭಾಷೆಯ ʼಸರ್ಕೀಟ್‌ʼ ಚಿತ್ರವು ತೀರ್ಪುಗಾರರ ವಿಶೇಷ ಮೆಚ್ಚುಗೆಯನ್ನು ಪಡೆದಿದೆ.

ಕನ್ನಡ ಸ್ಪರ್ಧಾ ವಿಭಾಗದಲ್ಲಿʼವನ್ಯಾʼ ಚಿತ್ರವು ಅತ್ಯುತ್ತಮ ಪ್ರಶಸ್ತಿಯನ್ನು ಗೆದ್ದಿದೆ. ದ್ವಿತೀಯ ಹಾಗೂ ತೃತೀಯ ಅತ್ಯುತ್ತಮ ಚಿತ್ರಗಳಾಗಿ ʼನಮ್‌ ಸಾಲಿʼ ಮತ್ತು ʼರಾವಣ ರಾಜ್ಯದಲ್ಲಿ ನವದಂಪತಿಗಳುʼ ಆಯ್ಕೆಯಾದರೆ, ʼಹಕ್ಕಿಗಾಗಿʼ ಚಿತ್ರಕ್ಕಾಗಿ ನೆಟ್‌ಪ್ಯಾಕ್‌ ತೀರ್ಪುಗಾರರ ಪ್ರಶಸ್ತಿ ಸಿಕ್ಕಿದೆ. ʼಮೃಗತೃಷ್ಣʼ ಮತ್ತು ʼಫೋರ್‌ ಬೈ ಫೋರ್‌ʼ ಚಿತ್ರಗಳು ತೀರ್ಪುಗಾರರ ವಿಶೇಷ ಮನ್ನಣೆಗೆ ಭಾಜನವಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !