ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬೆಂಗಳೂರು- ಹುಬ್ಬಳಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಇದೀಗ ತನ್ನ ಸೇವೆಯನ್ನು ನಿಲ್ಲಿಸಿದೆ.
ಉತ್ತರ ಕರ್ನಾಟಕ ಜನತೆಗೂ ಈ ರೈಲಿಗೂ ಒಂಥರಾ ಅವಿನಾಭಾವ ಸಂಬಂಧ. ಸಮಯಕ್ಕೆ ಸರಿಯಾಗಿ ತಮ್ಮ ಗಮ್ಯ ಸ್ಥಾನ ತಲುಪಲು ಸದಾ ಪ್ರಯಾಣಿಕರಿಗೆ ಅಚ್ಚುಮೆಚ್ಚಾಗಿದ್ದ ಈ ರೈಲು ಇದೀಗ ತನ್ನ ಪ್ರಯಾಣವನ್ನೇ ನಿಲ್ಲಿಸಿದೆ. ರೈಲು ಸಂಖ್ಯೆ 07340/07339 ಇನ್ನು ಮುಂದೆ ಪ್ರಯಾಣಿಕರ ಸೇವೆಗೆ ಲಭ್ಯವಿಲ್ಲ ಎಂದು ನೈರುತ್ಯ ರೈಲ್ವೆ ವಿಭಾಗ ಆದೇಶ ಹೊರಡಿಸಿದೆ.
ಸೀಟುಗಳು ತುಂಬದಿರುವುದರಿಂದ ರೈಲು ಸ್ಥಗಿತವಾಗಿದೆ ಎಂಬ ಹೇಳಿಕೆಯನ್ನು ಒಪ್ಪದ ಜನ ಸಾಮಾಜಿಕ ತಾಣಗಳಲ್ಲಿ ಈ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ. ಯಾವತ್ತೂ ಸ್ಥಾನಭರ್ತಿಯಾಗುತ್ತಿದ್ದ ಆ ಮಾರ್ಗ ಏಕಾಏಕಿ ಖಾಲಿಯಾಗಲು ಸಾಧ್ಯವಿಲ್ಲ. ಇಲಾಖೆಯು ಕಳೆದ 30 ದಿನಗಳ ಅಂಕಿಅಂಶ ಪ್ರಕಟಿಸಲಿ ಎಂದು ಹಲವರು ಸವಾಲೆಸೆದಿದ್ದಾರೆ.
ಶಕ್ತಿ ಯೋಜನೆ ಕಾರಣವಲ್ಲ: ಇಲಾಖೆ ಸ್ಪಷ್ಟನೆ
ಶಕ್ತಿ ಯೋಜನೆಯಿಂದಾಗಿ ರೈಲು ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿರುವುದಾಗಿ ಸುದ್ದಿಗಳು ಹರಿದಾಡುತ್ತಿದ್ದವು. ಇದನ್ನು ಉಲ್ಲೇಖಿಸಿ ಹೊಸದಿಗಂತ ಡಿಜಿಟಲ್ ಕೂಡಾ ವರದಿ ಮಾಡಿತ್ತು. ಆದರೆ ಈ ವದಂತಿಗಳನ್ನು ರೈಲ್ವೆ ಇಲಾಖಾಧಿಕಾರಿಗಳು ತಳ್ಳಿಹಾಕಿದ್ದಾರೆ. ಶಕ್ತಿ ಯೋಜನೆಗೂ ರೈಲು ಸೇವೆ ಸ್ಥಗಿತಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.