ಬೆಂಗಳೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್‌: ಮೊದಲ ಬಾರಿಗೆ ‘ದಸ್ಕತ್ತು’, ‘ಪಿದಾಯಿ’ ತುಳು ಚಿತ್ರಗಳು ಆಯ್ಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಶರತ್ ಲೋಹಿತಾಶ್ವ ಅಭಿನಯಿಸಿದ ಸಂತೋಷ್ ಮಾಡ ಅವರ ನಿರ್ದೇಶನದ ‘ಪಿದಾಯಿ’ ತುಳು ಚಿತ್ರ ಬೆಂಗಳೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್‌ನ ಎರಡು ಸ್ಪರ್ಧಾ ವಿಭಾಗಗಳಿಗೆ ಆಯ್ಕೆಯಾಗಿದೆ.

ಮೂಗಜ್ಜನ ಕೋಳಿ ಎಂಬ ಅರೆಬಾಷೆಯ ಮಕ್ಕಳ ಸಿನಿಮಾದ ಅನಂತರ ನಮ್ಮ ಕನಸು ಬ್ಯಾನರಿನ ಕೆ. ಸುರೇಶ್ ನಿರ್ಮಾಣದಲ್ಲಿ ರಮೇಶ್ ಶೆಟ್ಟಿಗಾರ್ ಬರೆದು , ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರಾದ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ ಶರತ್ ಲೋಹಿತಾಶ್ವ ಅಭಿನಯಿಸಿದ ತುಳು ಚಿತ್ರ ‘ಪಿದಾಯಿ’ ಈ ಬಾರಿಯ ಬೆಂಗಳೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್‌ನಲ್ಲಿ ಚಿತ್ರಭಾರತಿ (ಭಾರತೀಯ ಚಲನಚಿತ್ರ ಸ್ಪರ್ಧಾ ವಿಭಾಗ) ಮತ್ತು ಕನ್ನಡ ಚಲನಚಿತ್ರ ಸ್ಪರ್ಧಾ ವಿಭಾಗಗಳೆರಡಕ್ಕೂ ಆಯ್ಕೆಯಾಗಿದೆ.

ಬೆಂಗಳೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಪ್ರತಿಷ್ಠಿತ ಫಿಲಂ ಫೆಸ್ಟಿವಲ್‌ಗಳಲ್ಲಿ ಒಂದಾಗಿದ್ದು, ತುಳು ಸಿನಿಮಾವೊಂದು ಎರಡೂ ಸ್ಪರ್ಧಾ ವಿಭಾಗಗಳಿಗೆ ಆಯ್ಕೆಯಾಗಿರೋದು ಇದೇ ಮೊದಲ ಬಾರಿ. ಇದು ಇಡೀ ತುಳು ಚಲನಚಿತ್ರರಂಗಕ್ಕೆ ಹೆಮ್ಮೆ ತರುವಂಥದ್ದಾಗಿದೆ.

ಹಾಗೆಯೇ ಕನ್ನಡ ಚಲನಚಿತ್ರ ಸ್ಪರ್ಧಾ ವಿಭಾಗಕ್ಕೆ ಇನ್ನೊಂದು ತುಳು ಸಿನಿಮಾ “ದಸ್ಕತ್ತು”ಕೂಡ ಆಯ್ಕೆಯಾಗಿದೆ.

“ಪಿದಾಯಿ”ತುಳು ಸಿನಿಮಾ ಈಗಾಗಲೇ ಕೊಲ್ಕತ್ತಾ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಸೇರಿ ಹಲವಾರು ಇಂಟರ್ನ್ಯಾಷನಲ್ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ನೀಡಿ ಜನ ಮೆಚ್ಚುಗೆ ಪಡೆದಿದೆ. ಸಂತೋಷ್ ಮಾಡ ಅವರ ನಿರ್ದೇಶನದ ಮೊದಲ ತುಳು ಚಿತ್ರ “ಜೀಟಿಗೆ”ಗೆ ರಾಷ್ಟ್ರಪ್ರಶಸ್ತಿ ಲಭಿಸಿತ್ತು ಎಂಬುದಿಲ್ಲಿ ಉಲ್ಲೇಖನೀಯ.

ಬೆಂಗಳೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಮಾ. 1 ರಿಂದ 8 ರವರೆಗೆ ಬೆಂಗಳೂರಿನ ಒರಿಯನ್ ಮಾಲ್‌ನಲ್ಲಿರುವ ಪಿವಿಆರ್ ಥಿಯೇಟರ್‌ನಲ್ಲಿ ನಡೆಯಲಿದೆ.

ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಮಹಾಮಾಯಿ ಪಾತ್ರಿಯಾಗಿ ಖ್ಯಾತ ಕನ್ನಡ ನಟರಾದ ಶರತ್ ಲೋಹಿತಾಶ್ವ ಅವರು ಅಭಿನಯಿಸಿದ್ದಾರೆ. ಇವರ ಜೊತೆಗೆ ರೂಪ ವರ್ಕಾಡಿ, ಇಳಾ ವಿಟ್ಲ, ದೇವಿ ನಾಯರ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್, ಪ್ರೀತೇಶ್, ಅನಿಲ್ ರಾಜ್ ಉಪ್ಪಳ, ರವಿ ವರ್ಕಾಡಿ, ಹಾಗೂ ಬಾಲ ಪ್ರತಿಭೆಗಳಾದ ಮೋನಿಶ್, ತ್ರಿಷ, ದ್ರುವ, ನಿಹಾ, ಖುಷಿ ಡಿಬಿಸಿ ಶೇಖರ್, ಅನಿತಾ ಚಂದ್ರಶೇಖರ್ ಮುಂತಾದವರು ಅಭಿನಯಿಸಿದ್ದಾರೆ. ಈ ಸಿನಿಮಾದ ಛಾಯಾಗ್ರಾಹಣವನ್ನು ಉಣ್ಣಿ ಮಾಡವೂರ್‌ರವರು ನಿಭಾಯಿಸಿದ್ದಾರೆ. ಸಂಭಾಷಣೆಯನ್ನು ರಮೇಶ್ ಶೆಟ್ಟಿಗಾರ್ ಹಾಗೂ ಡಿ.ಬಿ.ಸಿ ಶೇಖರ್ ಬರೆದಿದ್ದಾರೆ. ಚಿತ್ರವನ್ನು ದ.ಕ ಜಿಲ್ಲೆಯ ಮುಡಿಪು ಹಾಗೂ ಮಂಜೇಶ್ವರದ ಗಡಿಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿತ್ತು.

ಡಾ.ವಿದ್ಯಾಭೂಷಣರ ಹಾಡು
ಪದ್ಮಶ್ರೀ ಪುರಸ್ಕೃತ ಕೈದಪ್ರಮ್ ದಾಮೋದರನ್ ನಂಬೂದಿರಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಸುಧಿರ್ ಅತ್ತಾವರ, ತುಳು ಅಕಾಡೆಮಿ ಪ್ರಶಸ್ತಿ ವಿಜೇತರಾದ ಕುಶಾಲಾಕ್ಷಿ ಕಣ್ವತೀರ್ಥರ ಸಾಹಿತ್ಯವಿದ್ದು ಅಜಯ್ ನಂಬೂದಿರಿಯವರು ಸಂಗೀತ ನೀಡಿದ್ದಾರೆ.

ಪ್ರಸಿದ್ಧ ಭಕ್ತಿ ಸಂಗೀತ ಕೀರ್ತನೆಕಾರರಾಗಿರುವ ಸಂಗೀತ ವಿದ್ಯಾನಿಧಿ ಡಾ. ವಿದ್ಯಾಭೂಷಣ್ ಪ್ರಪ್ರಥಮವಾಗಿ ಸಿನಿಮಾದಲ್ಲಿ ಹಾಡಿದ್ದಾರೆ ಎಂಬುದು ಇನ್ನೊಂದು ವಿಶೇಷತೆ. ಜೊತೆಗೆ ಹಿನ್ನೆಲೆ ಗಾಯಕರಾದ ಮೇಧಾ ವಿದ್ಯಾಭೂಷಣ್, ವಿಜೇಶ್ ಗೋಪಾಲ್ ಮುಂತಾದವರು ಕಂಠದಾನ ಮಾಡಿದ್ದಾರೆ. ಹಿನ್ನೆಲೆ ಸಂಗೀತವನ್ನು ಕೇರಳ ರಾಜ್ಯ ಪ್ರಶಸ್ತಿ ವಿಜೇತ ಸಂಗೀತಗಾರರಾದ ದೀಪಾಂಕುರನ್ ವಿಶೇಷ ಹಿನ್ನೆಲೆಯ ಸಂಗೀತವನ್ನು ನೀಡಿದ್ದಾರೆ. ಎರಡು ಸಲ ರಾಷ್ಟ್ರ ಪ್ರಶಸ್ತಿ ವಿಜೇತ, ಅತೀ ಹೆಚ್ಚು ಸಿನಿಮಾ ಸಂಕಲನಕಾರಾದ ಸುರೇಶ್ ಅರಸ್ ಅವರು “ಪಿದಾಯಿ” ಸಿನಿಮಾದ ಸಂಕಲನಕಾರರಾಗಿದ್ದಾರೆ. ಚಿತ್ರದ ಕಲಾ ನಿರ್ದೇಶಕರಾಗಿ ರಾಜೇಶ್ ಬಂದ್ಯೋಡು, ವಸ್ತ್ರ ವಿನ್ಯಾಸಕಾರರಾಗಿ ಮೀರಾ ಸಂತೋಷ್, ಮೇಕ್‌ಅಪ್ ಮ್ಯಾನ್ ಆಗಿ ಬಿನೋಯ್ ಕೊಲ್ಲಮ್, ಮುಖ್ಯ ಸಹ ನಿರ್ದೇಶಕರಾಗಿ ವಿಘ್ನೇಶ್ ಕುಲಾಲ್, ಸಹ ನಿರ್ದೇಶಕರಾಗಿ ಗಿರೀಶ್ ಆಚಾರ್ ಸುಳ್ಯ, ಪ್ರದೀಪ್ ರಾವ್, ವಿಶ್ವ ಮಂಗಲ್ಪಾಡಿ, ತಂಡದ ಮ್ಯಾನೇಜರ್ ಆಗಿ ರವಿ ವರ್ಕಾಡಿ ಹಾಗೂ ನಿಶ್ಚಲ ಛಾಯಾಗ್ರಾಹಕರಾಗಿ ದೀಪಕ್ ಉಪ್ಪಳ ನಿರ್ವಹಿಸಿದ್ದಾರೆ.

ತುಳುನಾಡಿನ ವಿಶೇಷತೆಯಾದ ಕುಣಿತ ಭಜನೆಯನ್ನು ಮೊದಲ ಬಾರಿಗೆ ಈ ಸಿನಿಮಾದಲ್ಲಿ ಪ್ರಯೋಗಿಸಲಾಗಿದೆ. ಸಂದೀಪ್ ಬಲ್ಲಾಳ್ ಸಂಗೀತ ನೀಡಿದ ಕುಣಿತಭಜನೆಗೆ ಸಾಹಿತ್ಯ ಬರೆದವರು ಯೋಗೀಶ್ ಅಡಕಳಕಟ್ಟೆ. ಖ್ಯಾತ ಕವಿ ಅಡ್ವೋಕೇಟ್ ಶಶಿರಾಜ್ ಕಾವೂರವರು ಬರೆದ ಇನ್ನೊಂದು ಕುಣಿತ ಭಜನೆಗೆ ಶಿನೋಯ್ ಜೋಸೆಫ್ ಸಂಗೀತ ನೀಡಿದ್ದಾರೆ.

ತುಳುವಿಗೆ ಹೆಮ್ಮೆ
ಭಾರತೀಯ ಚಲನಚಿತ್ರ ಸ್ಪರ್ಧಾ ವಿಭಾಗಕ್ಕೆ ಮಲೆಯಾಳ ಮತ್ತು ತಮಿಳಿನಿಂದ ತಲಾ ಮೂರು ಚಿತ್ರಗಳು ಆಯ್ಕೆಯಾಗಿದ್ದು, ಕನ್ನಡ, ಹಿಂದಿ, ಬೆಂಗಾಲಿಯಿಂದ ತಲಾ ಒಂದೊಂದು ಚಿತ್ರಗಳು ಆಯ್ಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ತುಳುವಿನಿಂದ ಎರಡು ಚಿತ್ರಗಳು ಆಯ್ಕೆಯಾಗಿರುವುದು ತುಳು ಚಿತ್ರಗಳಲ್ಲಿ ಕಥಾ ವಸ್ತು, ತಾಂತ್ರಿಕತೆ ಮತ್ತು ನಿರ್ದೇಶನ ಸೇರಿದಂತೆ ಗುಣಮಟ್ಟ ಹೆಚ್ಚಿರುವುದನ್ನು ಎತ್ತಿತೋರಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!