ಹೈಟೆಕ್ ಆಗಲಿದೆ ಬೆಂಗಳೂರು ಮೆಜೆಸ್ಟಿಕ್ ಬಸ್ ನಿಲ್ದಾಣ, 40 ಎಕರೆಯಲ್ಲಿ ಟ್ರಾನ್ಸ್​ಪೋರ್ಟ್ ಹಬ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೆಂಗಳೂರಿನ ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್‌ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಲಕ್ಷಾಂತರ ಜನ ಬಂದು ಹೋಗುತ್ತಾರೆ. ಸುಮಾರು ಮೂವತ್ತು‌ ವರ್ಷಗಳ ಇತಿಹಾಸವಿರುವ ಈ ಬಸ್ ನಿಲ್ದಾಣವನ್ನು ನವೀಕರಣ ಮಾಡಲು ಸರ್ಕಾರ ಮುಂದಾಗಿದೆ.

ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಜಾಗವನ್ನು ಪ್ರಾಜೆಕ್ಟ್‌ ಮೆಜೆಸ್ಟಿಕ್‌ ಯೋಜನೆಯ ಅಡಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ಪುನರ್‌ ಅಭಿವೃದ್ಧಿಪಡಿಸಿ, ವಾಣಿಜ್ಯ ಸಂಕೀರ್ಣದೊಂದಿಗೆ ಸಾರಿಗೆ ಹಬ್‌ ನಿರ್ಮಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಘೋಷಣೆ ಮಾಡಿದ್ದರು. ಇದೀಗ ಸಾರಿಗೆ ಇಲಾಖೆಯು ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ಇಂಟರ್‌ ಮಾಡೆಲ್ ಟ್ರಾನ್ಸ್​​ಪೋರ್ಟ್ ಹಬ್ ಆಗಿ ಪರಿವರ್ತನೆಯಾಗಲು ಸಜ್ಜಾಗುತ್ತಿದೆ.

ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಈ ಯೋಜನೆ ಬಗ್ಗೆ ತಂತ್ರಜ್ಞ ಸಲಹೆಗಾರರನ್ನು ನೇಮಿಸಲು ಕೆಎಸ್​ಆರ್​ಟಿಸಿ ಟೆಂಡರ್ ಕರೆದಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಸರ್ಕಾರದ ಯೋಜನೆ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಮೆಜೆಸ್ಟಿಕ್ ಟ್ರಾನ್ಸ್​ಪೋರ್ಟ್ ಹಬ್ ಯೋಜನೆಯ ಉದ್ದೇಶವೆಂದರೆ, ನಗರ ಮತ್ತು ಅಂತರನಗರ ಸಾರಿಗೆ. ಮೆಟ್ರೋ ಮತ್ತು ರೈಲ್ವೆ ಸೇವೆಗಳ ನಡುವೆ ಉತ್ತಮ ಸಂಪರ್ಕ ಕಲ್ಪಿಸಿ ಪ್ರಯಾಣಿಕರಿಗೆ ಸುಗಮ ಸಂಚಾರ ಅನುಭವ ಒದಗಿಸುವುದು. ಸುಮಾರು 40 ಎಕರೆ ಭೂಭಾಗದಲ್ಲಿ ಈ ಹಬ್ ನಿರ್ಮಾಣವಾಗಲಿದೆ, ಇದು ಈಗಿರುವ ಕೆಎಸ್‌ಆರ್‌ಟಿಸಿ ಟರ್ಮಿನಲ್‌ಗಳನ್ನು ಒಳಗೊಂಡಿರುತ್ತದೆ. ಶಾಪಿಂಗ್ ಕಾಂಪ್ಲೆಕ್ಸ್, ಆಹಾರ ಮಳಿಗೆಗಳು, ಕಚೇರಿ ಪ್ರದೇಶಗಳು ಸೇರಿ ವಾಣಿಜ್ಯ ವ್ಯವಸ್ಥೆಗೂ ಅವಕಾಶವಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!