ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ವಿರುದ್ಧ ಬಹಿರಂಗವಾಗಿ ದ್ವೇಷ ಕಾರಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಇದೀಗ ಬಿಸಿಸಿಐ ಮುಂದೆ ಮಂಡಿಯೂರಿದ್ದು, ಹದಗೆಟ್ಟಿರುವ ಸಂಬಂಧವನ್ನು ಸರಿಪಡಿಸಲು ಮುಂದಾಗಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಬಿಸಿಸಿಐ ವಿರುದ್ಧ ತಿರುಗಿಬಿದ್ದಿದ್ದ ಪರಿಣಾಮ ಈಗಾಗಲೇ ಐಪಿಎಲ್ ನಿಂದ ಆಟಗಾರರರು ದೂರ ಉಳಿದಿದ್ದು, ಅತ್ತ ಟಿ20 ವಿಶ್ವಕಪ್ ನಲ್ಲೂ ಭಾಗವಹಿಸಿಲ್ಲ. ಹೀಗಾಗಿ ಮುಂಬರುವ ಉಭಯ ದೇಶಗಳ ಸರಣಿ ಜೊತೆಗೆ ಏಷ್ಯಾಕಪ್ ಕೂಡ ಇದ್ದು, ಇದಕ್ಕೂ ಮುನ್ನ ಎಲ್ಲವನ್ನೂ ಸರಿ ಮಾಡಲು ಮುಂದಾಗಿದೆ. ಹೀಗಾಗಿ ಬಿಸಿಸಿಐಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಪತ್ರ ಬರೆದಿದೆ ಎಂದು ವರದಿಯಾಗಿದೆ.
ಪತ್ರದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧವನ್ನು ಮತ್ತೆ ಸರಿಪಡಿಸುವ ಬಯಕೆಯನ್ನು ವ್ಯಕ್ತಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ವರ್ಷದ ಸೆಪ್ಟೆಂಬರ್ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ಏಕದಿನ ಮತ್ತು ಟಿ20 ಸರಣಿ ನಡೆಯಬೇಕಿದ್ದು, ಇದಕ್ಕಾಗಿ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ ಮಾಡಬೇಕಾಗಿದೆ. ಬಳಿಕ ಮುಂದಿನ ವರ್ಷದ ಏಷ್ಯಾಕಪ್ ಕೂಡ ಇದ್ದು, ಬಾಂಗ್ಲಾದೇಶದಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಆದ್ದರಿಂದ, ಬಿಸಿಸಿಐ ಜೊತೆಗಿನ ಸಂಬಂಧ ಸರಿಗೊಳಿಸದೆ ಇದ್ದರೆ ಟೀಂ ಇಂಡಿಯಾ ಈ ಪಂದ್ಯಾವಳಿಗಾಗಿ ಬಾಂಗ್ಲಾದೇಶಕ್ಕೆ ಪ್ರಯಾಣಿಸಲು ನಿರಾಕರಿಸಬಹುದು. ಇದರಿಂದ ನಷ್ಟವಾಗಲಿದ್ದು, ಹೀಗಾಗಿ ಪರಿಸ್ಥಿತಿಯನ್ನು ಸರಿಪಡಿಸುವ ಬಯಕೆಯನ್ನು ಮಂಡಳಿ ವ್ಯಕ್ತಪಡಿಸುತ್ತಿದೆ.



