ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ (76) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಂದು ನಿಧನರಾಗಿದ್ದಾರೆ. ನಟನ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟನಿಗೆ ತಡರಾತ್ರಿ ರಾತ್ರಿ ಏಕಾಏಕಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಕರೆತಂದಿದ್ದಾದರೂ ಫಲಕಾರಿಯಾಗದೇ ತಡರಾತ್ರಿ 2:30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿರುವ ಪಾರ್ಥಿವ ಶರೀರವನ್ನ ಸುಲ್ತಾನ್ ಪಾಳ್ಯದಲ್ಲಿರುವ ಅವರ ನಿವಾಸಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಬೆಳಗ್ಗೆ 10:30 ರಿಂದ ಸಂಜೆ 4 ಗಂಟೆ ವರೆಗೆ ಅಂತಿಮ ದರುಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ತಂದೆ ಸಾವಿನ ಕುರಿತು ಮಾಹಿತಿ ನೀಡಿರುವ ಬ್ಯಾಂಕ್ ಜನಾರ್ಧನ್ ಅವರ ಪುತ್ರ ಗುರುಪ್ರಸಾದ್, 20 ದಿನಗಳಿಂದ ಆಸ್ಪತ್ರೆಗೆ ಹೋಗ್ತಾ ಇದ್ರು, ಸಾಕಷ್ಟು ಟ್ರೀಟ್ಮೆಂಟ್ ಕೊಡಿಸಿದ್ದೇವು. ಮೂರು ದಿನಗಳಿಂದ ಆರೋಗ್ಯ ಸಮಸ್ಯೆ ಏರುಪೇರು ಆಗುತ್ತಿತ್ತು. ನಂತರ ಆಸ್ಪತ್ರೆಗೆ ದಾಖಲು ಮಾಡಿದ್ವು, ನಿನ್ನೆ ತುಂಬಾ ಉಸಿರಾಟದ ಸಮಸ್ಯೆಯಾಗಿತ್ತು. ವೈದ್ಯರು ಕೂಡ ತುಂಬಾ ಪ್ರಯತ್ನ ಪಟ್ಟಿದ್ರು. ಆದ್ರೆ ಉಳಿಸಿಕೊಳ್ಳಲು ಆಗಲಿಲ್ಲ ಬೆಳಗಿನ ಜಾವ 2.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ.