ಹೊಸದಿಗಂತ ವರದಿ, ಬಂಟ್ವಾಳ:
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಇರಾಕೋಡಿ ಎಂಬಲ್ಲಿ ಪಿಕಪ್ ಚಾಲಕ ಅಬ್ದುಲ್ ರಹ್ಮಾನ್ ಯಾನೆ ರಹೀಂ (34) ಕೊಲೆ ಹಾಗೂ ಜೊತೆಗಿದ್ದ ಖಲಂದರ್ ಶಾಫಿ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.
ಕುರಿಯಾಳ ಗ್ರಾಮದ ಮುಂಡರಕೋಡಿ ನಿವಾಸಿ ದೀಪಕ್ (21), ಅಮ್ಮುಂಜೆ ಗ್ರಾಮದ ಶಿವಾಜಿನಗರ ನಿವಾಸಿ ಪ್ರಥ್ವಿರಾಜ್ (21) ಹಾಗೂ ಅಮ್ಮುಂಜೆ ಗ್ರಾಮದ. ಶಿವಾಜಿನಗರ ನಿವಾಸಿ ಚಿಂತನ್ (19) ಎಂಬವರನ್ನು ಬಂಧಿಸಲಾಗಿದ್ದು, ಈ ಮೂವರನ್ನು ಶುಕ್ರವಾರ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಸ್ಥಳ ಮಹಜರು ಸಹಿತ ಆರೋಪಿಗಳ ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ನಿವೇದನೆಯಂತೆ ನ್ಯಾಯಾಲಯ ಜೂ.9 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಸಮಿತ್ ಮತ್ತು ರವಿರಾಜ್ ಎಂಬವರಿಬ್ಬರನ್ನು ಕೂಡ ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದಾರೆ.