ಹೊಸದಿಗಂತ ವರದಿ, ಬಂಟ್ವಾಳ
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಇರಾಕೋಡಿ ಎಂಬಲ್ಲಿ ಪಿಕಪ್ ಚಾಲಕ ಅಬ್ದುಲ್ ರಹಿಮಾನ್ (34) ಅವರನ್ನು ಕೊಲೆಗೈದ ಹಾಗೂ ಜೊತೆಗಿದ್ದ ಖಲಂದರ್ ಶಾಫಿ ಎಂಬವರ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪೊಲೀಸರ ತಂಡ ಮೂವರನ್ನು ಬಂಧಿಸಿದ್ದು, ಇದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರು ಖಚಿತಪಡಿಸಿ ಪ್ರಕಟಣೆ ಹೊರಡಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿ ಎಂಬಲ್ಲಿ ಡಿವೈಎಸ್ಪಿ ವಿಜಯಪ್ರಸಾದ್ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ಕುರಿಯಾಳ ಗ್ರಾಮದ ಮುಂಡರಕೋಡಿ ನಿವಾಸಿ ದೀಪಕ್ (21), ಅಮ್ಮುಂಜೆ ಗ್ರಾಮದ ಶಿವಾಜಿನಗರ ನಿವಾಸಿ ಪ್ರಥ್ವಿರಾಜ್ (21) ಹಾಗೂ ಅಮ್ಮುಂಜೆ ಗ್ರಾಮದ. ಶಿವಾಜಿನಗರ ನಿವಾಸಿ ಚಿಂತನ್ (19) ಎಂಬವರನ್ನು ಬಂಧಿಸಿದ್ದಾರೆ.ಉಳಿದಂತೆ ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಆರೋಪಿಗಳ ಶೋಧಕಾರ್ಯ ಮುಂದುವರಿದಿದೆ ಎಂದು ಅವರ ಪ್ರಕಟಣೆ ತಿಳಿಸಿದೆ.
ಕೃತ್ಯ ನಡೆದ ಬೆನ್ನಲ್ಲೇ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯಪ್ರಸಾದ್ ಅವರನ್ನು ತನಿಖಾಧಿಕಾರಿಯಾಗಿಸಿ 5 ತಂಡಗಳನ್ನು ರಚಿಸಲಾಗಿತ್ತು.
ಅಬ್ದುಲ್ ರಹಿಮಾನ್ ಕೊಲೆ ಪ್ರಕರಣವನ್ನು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆಯನ್ನು ಮುಂದುವರಿಸಿದ್ದು, ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ನಡೆದು ಕೆಲವೇ ದಿನಗಳಾದ ಕಾರಣ ಇದು ಪ್ರತೀಕಾರದ ಹತ್ಯೆ ಎಂಬ ಅನುಮಾನವೂ ಪೊಲೀಸರಿಗೆ ಎದುರಾಗಿತ್ತು. ಇದೇ ಸಮಯದಲ್ಲಿ ಇದು ಪೂರ್ವದ್ವೇಷದ ಹಿನ್ನೆಲೆಯಲ್ಲಿ ನಡೆದ ಕೃತ್ಯವೇ ಎಂಬ ಶಂಕೆಯು ಪೊಲೀಸರಲ್ಲಿ ವ್ಯಕ್ತವಾಗಿತ್ತು. ಹೀಗಾಗಿ ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.