ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ರಾಜಕಾರಣದ ಪ್ರತಿಷ್ಠಿತ ಕ್ಷೇತ್ರವಾದ ಬಾರಾಮತಿಯಲ್ಲಿ ಸುನೇತ್ರಾ ಪವಾರ್ ಅವರು ವಿಧಾನಸಭಾ ಉಪಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಜಿತ್ ಪವಾರ್ ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನಕ್ಕೆ ಏಪ್ರಿಲ್ 23ರಂದು ಮತದಾನ ನಡೆಯಬೇಕಿತ್ತು. ಆದರೆ, ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣದಿಂದ ಹಿಂತೆಗೆದುಕೊಂಡ ಪರಿಣಾಮ ಸುನೇತ್ರಾ ಪವಾರ್ ಅವರ ಹಾದಿ ಸುಗಮವಾಗಿದೆ.
ಜನವರಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಅಂದಿನ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ನಿಧನರಾಗಿದ್ದರು. ಅವರ ನಿಧನದ ನಂತರ ಪತ್ನಿ ಸುನೇತ್ರಾ ಪವಾರ್ ಅವರನ್ನು ರಾಜ್ಯದ ಉಪಮುಖ್ಯಮಂತ್ರಿಯಾಗಿ ನೇಮಿಸಲಾಗಿತ್ತು. ಸಾಂವಿಧಾನಿಕ ನಿಯಮದಂತೆ ಅವರು ಶಾಸಕಿಯಾಗಿ ಆಯ್ಕೆಯಾಗುವುದು ಅನಿವಾರ್ಯವಾಗಿತ್ತು. ಅಜಿತ್ ಪವಾರ್ ಅವರ ಮೇಲಿನ ಗೌರವಾರ್ಥವಾಗಿ ಈ ಬಾರಿ ಸುನೇತ್ರಾ ಅವರ ವಿರುದ್ಧ ಸ್ಪರ್ಧಿಸಬಾರದೆಂದು ಶರದ್ ಪವಾರ್, ಸುಪ್ರಿಯಾ ಸುಳೆ ಹಾಗೂ ಎನ್ಸಿಪಿ ಹಿರಿಯ ನಾಯಕರ ನಿಯೋಗವು ಕಾಂಗ್ರೆಸ್ ನಾಯಕರಿಗೆ ವಿಶೇಷ ಮನವಿ ಮಾಡಿತ್ತು.
ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನವಾದ ಇಂದು, ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಅವರು ತಮ್ಮ ಪಕ್ಷದ ಅಭ್ಯರ್ಥಿ ಅಮರ್ ಮೋರೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದರು. ಈ ಮೂಲಕ ಪವಾರ್ ಕುಟುಂಬದ ಭದ್ರಕೋಟೆಯಾಗಿರುವ ಬಾರಾಮತಿಯಲ್ಲಿ ಸುನೇತ್ರಾ ಪವಾರ್ ಅವಿರೋಧವಾಗಿ ಶಾಸಕಿಯಾಗಿ ಆಯ್ಕೆಯಾದಂತಾಗಿದೆ.



