September 28, 2026
Monday, September 28, 2026
spot_img

ನಿತೀಶ್ ಕುಮಾರ್ ಯುಗಾಂತ್ಯ! ಬಿಹಾರದ ನೂತನ ಮುಖ್ಯಮಂತ್ರಿ ಪಟ್ಟ ಯಾರಿಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ರಾಜಕಾರಣದಲ್ಲಿ ದೊಡ್ಡ ಬದಲಾವಣೆಯ ಗಾಳಿ ಬೀಸುತ್ತಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶುಕ್ರವಾರ (ಏಪ್ರಿಲ್ 10) ರಾಜ್ಯಸಭಾ ಸದಸ್ಯರಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರ ಬೆನ್ನಲ್ಲೇ ಬಿಹಾರದ ಮುಖ್ಯಮಂತ್ರಿ ಗಾದಿಗೆ ಹೊಸಬರ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದೆ.

ನಾಳೆ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ನಿತೀಶ್ ಕುಮಾರ್ ಅವರು ಪಾಟ್ನಾಗೆ ಮರಳಲಿದ್ದಾರೆ. ಏಪ್ರಿಲ್ 13 ರಿಂದ ಸಚಿವ ಸಂಪುಟ ಸಭೆ ನಡೆಯಲಿದ್ದು, ತಮ್ಮ ಉತ್ತರಾಧಿಕಾರಿಯ ಆಯ್ಕೆಯ ಬಗ್ಗೆ ಅಂತಿಮ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಏಪ್ರಿಲ್ 14 ರಂದು ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.

ಏಪ್ರಿಲ್ 15 ರಂದು ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಸಮಾರಂಭ ನಡೆಯುವ ನಿರೀಕ್ಷೆಯಿದೆ. ವಿಶೇಷವೆಂದರೆ, ಇತ್ತೀಚೆಗಷ್ಟೇ ಜೆಡಿಯು ಸೇರಿದ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರಿಗೆ ಹೊಸ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ.

ಬಿಹಾರ ವಿಧಾನಸಭೆಯ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ ಈ ಬಾರಿ ಸರ್ಕಾರದ ನೇತೃತ್ವ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಮುಖ್ಯಮಂತ್ರಿ ರೇಸ್‌ನಲ್ಲಿ ಪ್ರಸ್ತುತ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ಕೇಂದ್ರ ಸಚಿವ ನಿತ್ಯಾನಂದ ರೈ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಒಟ್ಟಿನಲ್ಲಿ, ಏಪ್ರಿಲ್ 14ರಂದು ಬಿಹಾರದ ಮುಂದಿನ ‘ಸಾರಥಿ’ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

Must Read