ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಠ ಮತ್ತು ಎಸ್‌ಜೆಎಂ ಶಿಕ್ಷಣ ಸಂಸ್ಥೆಗಳ ದೈನಂದಿನ ವ್ಯವಹಾರಗಳ ಮೇಲ್ವಿಚಾರಣೆಗಾಗಿ ರಚಿಸಲಾದ ತಾತ್ಕಾಲಿಕ ಆಡಳಿತ ಸಮಿತಿಯು ಮುರುಘಾ ಮಠದ ಉಸ್ತುವಾರಿಯಾಗಿ ಬಸವಪ್ರಭು ಸ್ವಾಮೀಜಿ ಅವರನ್ನು ಆಯ್ಕೆ ಮಾಡಿದೆ.
ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಪೋಕ್ಸೋ ಪ್ರಕರಣ ಇತ್ಯರ್ಥವಾಗುವವರೆಗೆ ತಾತ್ಕಾಲಿಕ ಆಡಳಿತ ಸಮಿತಿ ರಚನೆ ಮಾಡುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಅದರ ಅನ್ವಯ ಸಮಿತಿಯನ್ನು ರಚನೆ ಮಾಡಲಾಗಿತ್ತು.
ಅದರಂತೆ ಸಮಿತಿಯು ನಿನ್ನೆ ಸಭೆ ನಡೆಸಿದ್ದು, ಸಭೆಯಲ್ಲಿ ಬಸವಪ್ರಭು ಸ್ವಾಮೀಜಿ ಅವರನ್ನು ಮಠದ ಉಸ್ತುವಾರಿಯಾಗಿ ಆಯ್ಕೆ ಮಾಡಲಾಯಿತು. ಇದೇ ವೇಳೆ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಸಮಿತಿಯ ಕಾರ್ಯದರ್ಶಿಯನ್ನಾಗಿ ಮಾಡಲು ಕೂಡ ಸರ್ವಾನುಮತದಿಂದ ನಿರ್ಧರಿಸಲಾಯಿತು. ಇದಲ್ಲದೆ ಆಡಳಿತ ಸಮಿತಿಯ ಸ್ವರೂಪ ಹಾಗೂ ಪದಾಧಿಕಾರಿಗಳ ಹೆಸರನ್ನು ಶೀಘ್ರವೇ ಹೈಕೋರ್ಟ್‌ಗೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಪೋಕ್ಸೊ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಿವಮೂರ್ತಿ ಶರಣರು ಮಠದ ಉಸ್ತುವಾರಿಯನ್ನು ಕಾನೂನು ಬದ್ಧವಾಗಿ ಬಸವಪ್ರಭು ಸ್ವಾಮೀಜಿಗೆ ನೀಡಿದ್ದರು. ಆದರೆ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದ್ದರಿಂದ ಸ್ವಾಮೀಜಿ ಧಾರ್ಮಿಕ ಕೈಂಕರ್ಯಗಳಿಗೆ ಮಾತ್ರ ಸೀಮಿತವಾಗಿದ್ದರು.
ಶಾಸಕ ವೀರೇಂದ್ರ ಕೆ.ಸಿ, ಹನುಮಲಿ ಷಣ್ಮುಖಪ್ಪ ಸೇರಿದಂತೆ ಲಿಂಗಾಯತ ಸಮಾಜದ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆ ಬಳಿಕ ಮಾತನಾಡಿದ ಬಸವಪ್ರಭು ಸ್ವಾಮೀಜಿಗಳು, ಹೈಕೋರ್ಟ್ ನಿರ್ದೇಶನದ ಆಧಾರದ ಮೇಲೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ ಎಂದರು.