ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾವಲಿಗಳನ್ನು ಬೇಟೆಯಾಡಿ ಅವುಗಳ ಮಾಂಸವನ್ನು ಕೋಳಿ ಮಾಂಸದ ಜೊತೆ ಮಿಶ್ರಣ ಮಾಡಿ ಚಿಕನ್ ಚಿಲ್ಲಿ ಎಂದು ಹೇಳಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಹಾಗೂ ಆಹಾರ ಸುರಕ್ಷತ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಗಳು ತಮ್ಮ ರಸ್ತೆ ಬದಿ ಫಾಸ್ಟ್‌ಫುಡ್ ಅಂಗಡಿಗಳಲ್ಲಿ ಕೋಳಿ ಮಾಂಸದ ಜೊತೆ ಈ ಬಾವಲಿ ಮಾಂಸವನ್ನು ಮಿಶ್ರಣ ಮಾಡಿ ಚಿಕನ್ ಚಿಲ್ಲಿ ಎಂದು ಮಾರಾಟ ಮಾಡುತ್ತಿದ್ದರು. ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಸಾರ್ವಜನಿಕ ಆರೋಗ್ಯ ಸುರಕ್ಷತೆ ಮತ್ತು ಅಕ್ರಮ ವನ್ಯಜೀವಿ ವ್ಯಾಪಾರದ ಬಗ್ಗೆ ತೀವ್ರ ಆತಂಕ ಮೂಡಿಸಿದೆ.
ಸೇಲಂನ ತೋಪ್ಪುರ್ ರಾಮಸಾಮಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ನಡೆಸಿದ ದಾಳಿಯ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿ ಬಂದಿದ್ದು, ಈ ಬಗ್ಗೆ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಶಂಕಿತರನ್ನು ಬಂಧಿಸಿದರು. ಈ ವೇಳೆ ಮಾರಾಟಕ್ಕಾಗಿ ಇಬ್ಬರು ವ್ಯಕ್ತಿಗಳು ಸ್ಥಳದಲ್ಲಿ ಬಾವಲಿ ಮಾಂಸವನ್ನು ಬೇಯಿಸುತ್ತಿರುವುದು ಕಂಡು ಬಂದಿದೆ ಎಂದು ವರದಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ 36 ವರ್ಷದ ಕಮಲ್ ಮತ್ತು 35 ವರ್ಷದ ಸೆಲ್ವಂ ಎಂಬುವರನ್ನು ಬಂಧಿಸಲಾಗಿದೆ. ಈ ಆರೋಪಿಗಳು ವಿಚಾರಣೆಯ ಸಮಯದಲ್ಲಿ ಒಮಲೂರಿನ ಡ್ಯಾನಿಶ್‌ಪೆಟ್ಟೈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಹಾರ ಮಳಿಗೆಗಳಲ್ಲಿ ಬಾವಲಿ ಮಾಂಸವನ್ನು ಚಿಲ್ಲಿ ಚಿಕನ್ ಮತ್ತು ಇತರ ಜನಪ್ರಿಯ ಭಕ್ಷ್ಯಗಳೆಂದು ಹೇಳಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಜನರು ಇಲ್ಲಿ ಕೋಳಿ ಮಾಂಸ ಎಂದು ನಂಬಿ ಬಾವಲಿ ಮಾಂಸವನ್ನು ಸೇವಿಸಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.