ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ನಾಮಫಲಕ ಹಾಕದವರಿಗೆ ಬಿಬಿಎಂಪಿ ಶಾಕ್ ನೀಡಿದ್ದು, ಟ್ರೇಡ್ ಲೈಸೆನ್ಸ್ ರದ್ದು ಮಾಡುವ ಮೂಲಕ ಬಿಸಿ ಮುಟ್ಟಿಸಿದೆ.
ನೋಟಿಸ್ ನೀಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂದು ಟ್ರೇಡ್ ಲೈಸೆನ್ಸ್ ರದ್ದು ಮಾಡಿದೆ. ಮಾಲ್ ಆಫ್ ಏಷ್ಯಾದ ಕೆಲವು ಮಳಿಗೆಗಳಿಗೆ ಬೀಗ ಹಾಕಲಾಗಿದೆ. ಕಾಲಾವಕಾಶ ನೀಡಿದರೂ ಉದ್ದಿಮೆದಾರರು ಕ್ಯಾರೆ ಎನ್ನದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರಿಗೆ ಪಾಲಿಕೆ ಬಿಸಿ ಮುಟ್ಟಿಸಿದೆ.
ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಇರಬೇಕು ಅಂತ ನೀಡಿದ್ದ 2 ತಿಂಗಳ ಗಡುವು ಮುಗಿದು ಹೋಗಿದೆ. ಶೇ.60ರಷ್ಟು ಕನ್ನಡರಷ್ಟು ಕನ್ನಡವಿರದ ನಾಮಫಲಕಗಳನ್ನ ಹಾಕಿದವರ ವಿರುದ್ಧ ಇತ್ತೀಚೆಗೆ ರಾಜ್ಯಾದ್ಯಂತ ಎಲ್ಲ ನಗರಗಳಲ್ಲೂ ಕ್ರಮಕೈಗೊಳ್ಳಬೇಕಿತ್ತು. ಇದಕ್ಕಾಗಿ ಬೆಂಗಳೂರು ಸೇರಿ ಎಲ್ಲ ನಗರಗಳಲ್ಲೂ ಅಧಿಕಾರಿಗಳು ಸಿದ್ಧತೆ ನಡೆಸಿದ್ದರು. ಅಲ್ಲದೇ ಕನ್ನಡ ಪರ ಸಂಘಟನೆಗಳು ಪ್ರತಿಭಟಿಸಲು ಸಿದ್ಧತೆ ನಡೆಸಿದ್ದವು. ಆದರೆ, ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಮತ್ತೆ 2 ವಾರಗಳ ಗಡುವು ನೀಡಿ ಟ್ವೀಟ್ ಮಾಡಿದ್ದರು.
ಶೇ. 60ರಷ್ಟು ಕನ್ನಡ ನಾಮಫಲಕ ಅಳವಡಿಸದಿದ್ದರೆ ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆ ನೀಡಿತ್ತು. ಈ ಸಂಬಂಧ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ವಿಕಾಸ್ ಕಿಶೋರ್ ಆದೇಶ ಹೊರಡಿಸಿದ್ದರು. ಅಂಗಡಿ ಲೈಸೆನ್ಸ್ ರದ್ದು ಮಾಡಿ ಬೀಗ ಹಾಕುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿತ್ತು.