ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 200ಕ್ಕೂ ಹೆಚ್ಚು ಬಾರ್, ಪಬ್ ಮತ್ತು ಹೋಟೆಲ್‌ಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೋಟಿಸ್ ಜಾರಿ ಮಾಡಿದ್ದು, ಇವುಗಳಲ್ಲಿ ಸ್ಮೋಕಿಂಗ್ ಝೋನ್ ಇಲ್ಲದ ಕಾರಣ ಕಾರಣವೇ ಈ ಕ್ರಮಕ್ಕೆ ಮುಂದಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಇಂತಹ ಹೋಟೆಲ್, ಬಾರ್ ಮತ್ತು ಪಬ್‌ಗಳಿಗೆ ನೋಟಿಸ್ ನೀಡಲಾಗಿದ್ದು, ಒಂದು ವಾರದೊಳಗೆ ಸ್ಮೋಕಿಂಗ್ ಝೋನ್ ನಿರ್ಮಿಸಲು ಸೂಚನೆ ನೀಡಲಾಗಿದೆ. ಒಟ್ಟು 20ಕ್ಕಿಂತ ಹೆಚ್ಚು ಆಸನ ಹೊಂದಿರುವ ಎಲ್ಲ ಹೋಟೆಲ್‌ಗಳು ಕಡ್ಡಾಯವಾಗಿ ಸ್ಮೋಕಿಂಗ್ ಝೋನ್ ಹೊಂದಿರಬೇಕು ಎಂದು ಬಿಬಿಎಂಪಿ ಆದೇಶಿಸಿದೆ.
ಸದ್ಯ ಈ ಆಸ್ತಿಗಳಲ್ಲಿ ಧೂಮಪಾನ ನಿಷೇಧಿತ ಪ್ರದೇಶ ಹಾಗೂ ಸ್ಮೋಕಿಂಗ್‌ಗಾಗಿ ನಿರ್ದಿಷ್ಟ ಜಾಗಗಳಿಲ್ಲದ ಕಾರಣದಿಂದ ಈ ನೋಟಿಸ್ ಜಾರಿಯಾಗಿದೆ. ಆದ್ದರಿಂದ, ಈ ನಿಯಮ ಉಲ್ಲಂಘನೆಯು ಸಾರ್ವಜನಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬ ಕಾರಣವನ್ನೂ ಉಲ್ಲೇಖಿಸಲಾಗಿದೆ.
ನೋಟಿಸ್ ಜಾರಿಯಾದ ಒಂದು ವಾರದೊಳಗೆ ಸ್ಮೋಕಿಂಗ್ ಝೋನ್ ನಿರ್ಮಿಸಲು ವಿಫಲರಾದರೆ, ಸಂಬಂಧಿತ ಬಾರ್ ಅಥವಾ ಹೋಟೆಲ್‌ಗಳ ಲೈಸೆನ್ಸ್ ಅನ್ನು ರದ್ದುಪಡಿಸಲಾಗುವುದು ಎಂದು ಬಿಬಿಎಂಪಿ ತೀವ್ರ ಎಚ್ಚರಿಕೆ ನೀಡಿದೆ.
ಇಂತಹ ನಿಟ್ಟಿನಲ್ಲಿ ಬಿಬಿಎಂಪಿಯ ಕ್ರಮ ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಯಂತ್ರಿಸಲು ಹಾಗೂ ಆರೋಗ್ಯಕರ ವಾತಾವರಣವನ್ನು ರೂಪಿಸಲು ತೆಗೆದುಕೊಂಡಿರುವ ಮುಖ್ಯ ಹೆಜ್ಜೆ ಎನ್ನಬಹುದು.