ಜಾಹೀರಾತಿನ ನಿಯಮಗಳನ್ನು ಪ್ರಕಟಿಸಿದ ಬಿಬಿಎಂಪಿ, ಎಲ್ಲೆಲ್ಲಿ ಜಾಹೀರಾತು ಹಾಕಬಹುದು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರು ಸುಂದರ ನಗರಿ, ಆದರೆ ಕೆಲವು ರಸ್ತೆಗಳಲ್ಲಿ ಬೇಕಾಬಿಟ್ಟಿ ಇರುವ ಜಾಹೀರಾತು ಫಲಕಗಳು ಹಾಗೂ ಇನ್ನಿತರ ಬೋರ್ಡ್‌ಗಳಿಂದ ನಗರದ ಸೌಂದರ್ಯ ಹಾಳಾಗುತ್ತಿದೆ ಅನ್ನೋದು ಬೆಂಗಳೂರಿಗರ ವಾದ. ಇದೀಗ ವೈಜ್ಞಾನಿಕವಾಗಿ ಮತ್ತು ನಗರದ ಸೌಂದರ್ಯ ಹಾಳಾಗದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  ಹೊಸ ಜಾಹೀರಾತು ಕಾಯ್ದೆ ಜಾರಿಗೊಳಿಸಿದೆ.

ಈ ಹೊಸ ಜಾಹೀರಾತು ಕರಡು ನೀತಿಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು, ಸರ್ಕಾರದ ರಾಜ್ಯಪತ್ರದ ಮೂಲಕ ಕರಡು ಪ್ರತಿಯನ್ನು ಪಾಲಿಕೆ ಬಿಡುಗಡೆ ಮಾಡಿದೆ. ಆಕ್ಷೇಪಣೆ ಸಲ್ಲಿಸುವುದಕ್ಕೆ ಸಾರ್ವಜನಿಕರಿಗೆ 30 ದಿನ ಕಾಲಾವಕಾಶ ನೀಡಲಾಗಿದೆ. ರಸ್ತೆಗೆ ಅಗಲದ ವಿಸ್ತೀರ್ಣಕ್ಕೆ ಅನುಗುಣವಾಗಿ ಪ್ರತಿ 100 ಮೀಟರ್‌ಗೆ ಎಷ್ಟು ಅಳತೆಯ ಜಾಹೀರಾತುಗಳನ್ನು ಪ್ರದರ್ಶಿಸಬಹುದು. ಈ ಜಾಹೀರಾತುಗಳ ಉದ್ದ 40 ಅಡಿ ಮೀರುವಂತಿಲ್ಲ. ಆಯಾ ಪ್ರದೇಶದಲ್ಲಿ ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಜಾಹೀರಾತು ಶುಲ್ಕವನ್ನು ನಿಗದಿಪಡಿಸಲಾಗಿದೆ.

ರಸ್ತೆ ಅಗಲ 60 ಅಡಿಯಿಂದ 80 ಅಡಿ ಇದ್ದರೆ ಪ್ರತಿ 100 ಮೀಟರ್‌ ಉದ್ದ ರಸ್ತೆಯ ಎರಡೂ ಬದಿ ಸೇರಿ 800 ಚದರಡಿ, ರಸ್ತೆ 80 ಅಡಿಯಿಂದ 100 ಅಡಿ ಇದ್ದರೆ ಎರಡೂ ಬದಿ 1000 ಚದರ ಅಡಿ, ರಸ್ತೆ 100 ಅಡಿಯಿಂದ 200 ಅಡಿ ಇದ್ದರೆ 1,100 ಚದರಡಿ, ರಸ್ತೆ ಅಗಲ 200 ಅಡಿಗಿಂತ ಹೆಚ್ಚಿದ್ದರೆ 1,200 ಚದರಡಿ ಜಾಹೀರಾತು ಪ್ರದರ್ಶಿಸಬಹುದು.

ವೃತ್ತಗಳಲ್ಲಿ ಪ್ರತಿ ಒಂದು ಲಕ್ಷ ವರ್ತುಲ ಪ್ರದೇಶಕ್ಕೆ 300 ಚದರಡಿ ಜಾಹೀರಾತು ಪ್ರದರ್ಶಿಸಬಹುದು. ಉದ್ದ 60 ಅಡಿ ಮೀರುವಂತಿಲ್ಲ. 60 ಅಡಿಗಿಂತ ಕಡಿಮೆಯಿರುವ ರಸ್ತೆ ಇರುವ ವಾಣಿಜ್ಯ ಅಥವಾ ಕೈಗಾರಿಕಾ ಪ್ರದೇಶಗಳಲ್ಲಿ ಪ್ರತಿ ಲಕ್ಷ ಚದರಡಿ ವರ್ತುಲ ಪ್ರದೇಶಕ್ಕೆ 300 ಚದರ ಅಡಿ ಜಾಹೀರಾತು ಪ್ರದರ್ಶಿಸಬಹುದು. ಉದ್ದ 30 ಅಡಿ ಮೀರುವಂತಿಲ್ಲ.

ಕುಮಾರಕೃಪ ರಸ್ತೆ ವಿಂಡ್ಸರ್‌ ಮ್ಯಾನರ್‌ ಜಂಕ್ಷನ್‌ನಿಂದ ಶಿವಾನಂದ ವೃತ್ತ, ರಾಜಭವನ ರಸ್ತೆ ಹೈಗ್ರೌಂಡ್ಸ್‌ನಿಂದ ಮಿನ್ಸ್ಕ್‌ ಸ್ಕ್ವೇರ್‌, ಸ್ಯಾಂಕಿ ರಸ್ತೆ ಹೈಗ್ರೌಂಡ್ಸ್‌ನಿಂದ ವಿಂಡ್ಸರ್‌ ಹಿಲ್ಡ್‌ ಸಿಗ್ನಲ್‌, ಅಂಬೇಡ್ಕರ್‌ ವೀಧಿ ಕೆ.ಆರ್‌. ವೃತ್ತದಿಂದ ಇನ್‌ಫೆಂಟ್ರಿ ಜಂಕ್ಷನ್‌ ಪೋಸ್ಟ್‌ ಆಫೀಸ್‌ ರಸ್ತೆ, ಕೆ.ಆರ್‌. ವೃತ್ತದಿಂದ ಎಸ್‌ಬಿಐ ವೃತ್ತ (ಕೆ.ಜಿ ರಸ್ತೆ) ಚಾಲುಕ್ಯ ವೃತ್ತ, ಮಹಾರಾಣಿ ಕಾಲೇಜ್‌ ರಸ್ತೆ, ಶೇಷಾದ್ರಿ ರಸ್ತೆ, ಕೆ.ಆರ್‌. ವೃತ್ತ, ಕಬ್ಬನ್‌ ಪಾರ್ಕ್‌ ಹಾಗೂ ಲಾಲ್‌ಬಾಗ್‌ ಆವರಣ, ಪತುಂಗ ರಸ್ತೆ, ಕೆ.ಆರ್‌. ವೃತ್ತದಿಂದ ಪೊಲೀಸ್‌ ಕಾರ್ನರ್‌ ಜಂಕ್ಷನ್‌, ಪ್ಯಾಲೇಸ್ ರಸ್ತೆ ಎಸ್‌ಬಿಐ ವೃತ್ತದಿಂದ ಚಾಲುಕ್ಯ ವೃತ್ತದಲ್ಲಿ ಜಾಹೀರಾತು ನಿಷೇಧಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತಿಗೆ ಕಡಿವಾಣ ಹಾಕಲು ಹಾಗೂ ಸರ್ಕಾರದ ಖಜಾನೆ ಭರ್ತಿ ಮಾಡುವ ನಿಟ್ಟಿನಲ್ಲಿ ಜಾಹೀರಾತು ನಿಯಮ ತಿದ್ದುಪಡಿ ಮಾಡಿ ಹೊಸ ಜಾಹೀರಾತು ನಿಯಮ ಜಾರಿಗೆ ತರುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತು. ಇದರ ಬೆನ್ನಲ್ಲೇ ಇಂದು ಹೊಸ ಜಾಹೀರಾತು ಕಾಯ್ದೆ ಜಾರಿ ಮಾಡಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!