ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ (BCCI) ವತಿಯಿಂದ ಮಾರ್ಚ್ 24, 25 ಹಾಗೂ 26, ರಂದು ಬೆಳಗಾವಿಯಲ್ಲಿ ಬೃಹತ್ ಕೈಗಾರಿಕಾ ಪ್ರದರ್ಶನ ಆಯೋಜಿಸಲಾಗಿದೆ.
ಬಿಸಿಸಿಐ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಮತ್ತು ಇವೆಂಟ್ ಚೇರಮನ್ ಉದಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಉದ್ಯಮಬಾಗ್‌ನ ಬೆಳಗಾವಿ ಫೌಂಡ್ರಿ ಕ್ಲಸ್ಟರ್‌ನಲ್ಲಿ BELEX ಹೆಸರಿನಲ್ಲಿ ಇಂಡಸ್ಟ್ರಿಯಲ್ ಮತ್ತು ಟ್ರೇಡ್ ಎಕ್ಸಿಬಿಷನ್ ಆಯೋಜಿಸಲಾಗುತ್ತಿದೆ.
ಈ ಪ್ರದರ್ಶನದ ಮೂಲಕ ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ಉತ್ಪಾದನಾ (Manufacturing), ವ್ಯಾಪಾರ (Trading), ಶಿಕ್ಷಣ (Education), ಕೃಷಿ (Agro) ಮತ್ತು ಆಹಾರ ಸಂಸ್ಕರಣಾ (Food Processing) ಕ್ಷೇತ್ರಗಳ ಸಾಮರ್ಥ್ಯವನ್ನು ಹೆಚ್ಚು ವ್ಯಾಪಕವಾಗಿ ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ:
ಅಲ್ಲದೆ, ನಮ್ಮ ಕೈಗಾರಿಕೆಗಳ ಶಕ್ತಿಯನ್ನು ಪ್ರದರ್ಶಿಸುವುದರ ಜೊತೆಗೆ ವಿವಿಧ ಉತ್ಪನ್ನಗಳು ಮತ್ತು ಸೇವೆಗಳನ್ನು ಈ ವೇದಿಕೆಯ ಮೂಲಕ ಪ್ರಚಾರ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿದೆ. ಬೆಳಗಾವಿ ಅಲ್ಲದೆ ಗೋವಾ, ಕೊಲ್ಲಾಪುರ, ಹುಬ್ಬಳ್ಳಿ ಧಾರವಾಡ ಉದ್ಯಮಿಗಳನ್ನೂ ಆಹ್ವಾನಿಸಲಾಗಿದೆ ಎಂದರು.
ಈ ಎಕ್ಸಿಬಿಷನ್‌ಗಾಗಿ 85ಕ್ಕಿಂತ ಹೆಚ್ಚು ಸ್ಟಾಲ್‌ಗಳನ್ನು ಹಾಕಲಾಗಿದ್ದು, ಇದರಿಂದ ಕೈಗಾರಿಕೆ ಮತ್ತು ವ್ಯಾಪಾರ ವಲಯದವರಿಗೆ ಪರಸ್ಪರ ಸಂವಹನ, ನೆಟ್‌ವರ್ಕಿಂಗ್ ಮತ್ತು ವ್ಯಾಪಾರ ವಿಸ್ತರಣೆಗೆ ಉತ್ತಮ ಅವಕಾಶಗಳು ದೊರೆಯಲಿವೆ ಎಂದರು.
BELEX 2026 ಒಂದು B2B (ಬಿಸಿನೆಸ್-ಟು-ಬಿಸಿನೆಸ್) ಪ್ರದರ್ಶನವಾಗಿದ್ದು, ಬೆಳಗಾವಿಯ ಕೈಗಾರಿಕಾ ಪರಿಸರದ ಶಕ್ತಿಯನ್ನು ಪರಿಚಯಿಸುವುದರ ಜೊತೆಗೆ ಉದ್ಯಮಿಗಳಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸ್ಥಳೀಯ ಕೈಗಾರಿಕೆಗಳ ಪುನರುಜ್ಜೀವನ ಮತ್ತು ಬೆಳವಣಿಗೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಬಿಸಿಸಿಐ ಹಾಗೂ ವ್ಯವಸ್ಥಾಪಕ ಸಮಿತಿಯ ಪರವಾಗಿ ಎಲ್ಲಾ ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು, ಉದ್ಯಮಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಪ್ರದರ್ಶನಕ್ಕೆ ಭೇಟಿ ನೀಡಿ ಇದರ ಪ್ರಯೋಜನ ಪಡೆಯಬೇಕೆಂದು ವಿನಂತಿಸಿದರು.
ಬಿಸಿಐ ಕಾರ್ಯದರ್ಶಿ ಸತೀಶ್ ಕುಲಕರ್ಣಿ, ಇವೆಂಟ್ ಉಪಾಧ್ಯಕ್ಷ, ವಿಕ್ರಮ ಜೈನ್, ಬಿಸಿಸಿಐ ಮಾಜಿ ಅಧ್ಯಕ್ಷ, ಎಫ್.ಕೆಸಿಸಿಐ ನಿರ್ದೇಶಕ ಸಂಜೀವ ಕತ್ತಿಶೆಟ್ಟಿ, ಬಿಸಿಸಿಐ ಹಿರಿಯ ಉಪಾಧ್ಯಕ್ಷ ಸ್ವಪ್ನಿಲ್ ಶಹ, ಜಂಟಿ ಕಾರ್ಯದರ್ಶಿ ಮನೋಜ ಮತ್ತಿಕೊಪ್ಪ, ಆಡಳಿತ ಮಂಡಳಿಯ ಸದಸ್ಯರಾದ ವೈಭವ ವೆರ್ಣೇಕರ್, ಸುಧೀರ ಚೌಗಲೆ, ಎಂ.ಕೆ.ಹೆಗಡೆ ಮೊದಲಾದವರಿದ್ದರು.



