ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಟ್ರೋಫಿ ಗೆದ್ದು ತವರಿಗೆ ಮರಳಿದ ಟೀಮ್ ಇಂಡಿಯಾ ಆಟಗಾರರನ್ನು ಪ್ರಧಾನಿ ನರೇಂದ್ರ ಮೋದಿತಮ್ಮ ನಿವಾಸದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು.
ಈ ವೇಳೆ ಬಿಸಿಸಿಐ ಕಡೆಯಿಂದ ಮೋದಿಗೆ ನಮೋ ನಂ.1 ಎಂದು ಬರೆದ ಟೀಮ್ ಇಂಡಿಯಾ ಜೆರ್ಸಿಯನ್ನು ಉಡುಗೊರೆಯಾಗಿ ನೀಡಲಾಯಿತು.
ಇಂದು ಬೆಳಗ್ಗೆ ದೆಹಲಿಗೆ ಆಗಮಿಸಿದ ಆಟಗಾರರು ಬಳಿಕ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ವಿಶ್ವಕಪ್ ಗೆಲುವಿನ ಕುರಿತು ಆಟಗಾರರು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು. ಮೋದಿ ಕೂಡ ಆಟಗಾರರೊಂದಿಗೆ ಕೆಲ ಕಾಲ ಕುಶಲೋಪರಿ ನಡೆಸಿದರು.
ಬಳಿಕ ವಿಶ್ವ ಕಪ್ ಟ್ರೋಫಿ ಜತೆ ಆಟಗಾರರೊಂದಿಗೆ ಗ್ರೂಫ್ ಫೋಟೊ ತೆಗೆಸಿಕೊಂಡರು. ಆಟಗಾರರಿಗೆ ವಿಶೇಷ ಭೋಜನ ಕೂಟವನ್ನು ಕೂಡ ಏರ್ಪಡಿಸಲಾಗಿತ್ತು. ಈ ಎಲ್ಲ ಕಾರ್ಯಕ್ರಮದ ಬಳಿಕ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ನಮೋ ಎಂದು ಬರೆದ ಟೀಮ್ ಇಂಡಿಯಾ ಜೆರ್ಸಿಯನ್ನು ನೆನಪಿನ ಕಾಣಿಕೆಯಾಗಿ ನೀಡಿದರು.
ಈ ಫೋಟೊವನ್ನು ಬಿಸಿಸಿಐ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಮಾಡಿದೆ.
ವಿಶ್ವ ವಿಜೇತ ತಂಡವನ್ನು ಭೇಟಿ ಮಾಡಿದ ಫೋಟೊವನ್ನು ಮೋದಿ ಕೂಡ ತನ್ನ ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದ್ದು, ನಮ್ಮ ಚಾಂಪಿಯನ್‌ಗಳೊಂದಿಗೆ ಉತ್ತಮ ಸಭೆ!…ಪಂದ್ಯಾವಳಿಯ ಸ್ಮರಣೀಯ ಸಂಭಾಷಣೆ ಅನುಭವವನ್ನು ಕೇಳಿ ನಿಜವಾಗಿಯೂ ಸಂತಸ ತಂದಿತು ಎಂದು ಬರೆದುಕೊಂಡಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಬಿಸಿಸಿಐ, ‘ಜಯಶಾಲಿ ಭಾರತ ಕ್ರಿಕೆಟ್ ತಂಡವು ಇಂದು ಮಾನ್ಯ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿತು. ನೀವು ನಮಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿ ಹುರಿದುಂಬಿಸಿದ್ದಕ್ಕೆ ಹಾಗೂ ಅಪಾರವಾದ ಬೆಂಬಲ ನೀಡಿದಕ್ಕೆ ಹೃದಯಪೂರ್ವಕ ಧನ್ಯವಾದಗಳು’ ಎಂದು ಟ್ವೀಟ್ ಮಾಡಿದೆ.
ಆಟಗಾರರಿಗೆ ಕರೆ ಮಾಡಿದ್ದ ಮೋದಿ
ಜೂನ್ 29ರಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ 7 ರನ್‌ಗಳಿಂದ ಜಯ ಸಾಧಿಸಿತ್ತು. ಆ ವೇಳೆ ಆಟಗಾರರಿಗೆ ಕರೆ ಮಾಡಿ ಮೋದಿ ಅಭಿನಂದನೆ ಸಲ್ಲಿಸಿದ್ದರು.