ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಕ್ರಿಕೆಟ್ ತಂಡದ (Team India) ಪ್ರಮುಖ ಪ್ರಾಯೋಜಕತ್ವ ಹಕ್ಕುಗಳಿಗಾಗಿ ಬಿಸಿಸಿಐ ಟೆಂಡರ್ ಆಹ್ವಾನಿಸಿದೆ.
BYJU’S ಜೊತೆಗಿನ BCCI ಒಪ್ಪಂದವು ಕಳೆದ ಹಣಕಾಸು ವರ್ಷದಲ್ಲಿ ಕೊನೆಗೊಂಡಿದ್ದು, ಹೀಗಾಗಿ ಹೊಸ ಪ್ರಾಯೋಜಕತ್ವಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇದೀಗ ಪ್ರತಿಷ್ಠಿತ ಅವಕಾಶಕ್ಕಾಗಿ ಬಿಡ್ ಮಾಡುವಂತೆ ಮಂಡಳಿಯು ಟೆಂಡರ್ ಗೆ ಆಹ್ವಾನ (ಐಟಿಟಿ) ಬಿಡುಗಡೆ ಮಾಡಿದೆ.
‘ಬಿಡ್ ಸಲ್ಲಿಸಲು ಬಯಸುವ ಯಾವುದೇ ಆಸಕ್ತ ಪಕ್ಷವು ಐಟಿಟಿಯನ್ನು ಖರೀದಿಸಬೇಕಾಗುತ್ತದೆ. ಆದಾಗ್ಯೂ, ಐಟಿಟಿಯಲ್ಲಿ ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸುವವರು ಮತ್ತು ಅದರಲ್ಲಿ ನಿಗದಿಪಡಿಸಿದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟವರು ಮಾತ್ರ ಬಿಡ್ ಮಾಡಲು ಅರ್ಹರಾಗಿರುತ್ತಾರೆ. ಕೇವಲ ಐಟಿಟಿಯನ್ನು ಖರೀದಿಸುವುದರಿಂದ ಯಾವುದೇ ವ್ಯಕ್ತಿಗೆ ಬಿಡ್ ಮಾಡಲು ಅರ್ಹತೆ ಇರುವುದಿಲ್ಲ’ ಎಂದು ಬಿಸಿಸಿಐ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ವೇಳೆ ಭಾರತ ತಂಡದ ಜೆರ್ಸಿಯಲ್ಲಿ ಹೊಸ ಪ್ರಾಯೋಜಕರ ಹೆಸರು ಪ್ರಕಟವಾಗಲಿದೆ.
ಬಿಸಿಸಿಐ ಇತ್ತೀಚೆಗೆ ಪ್ರಸಿದ್ಧ ಕ್ರೀಡಾ ಉಡುಪು ತಯಾರಕ ಕಂಪನಿ ಅಡಿಡಾಸ್ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಅಧಿಕೃತ ಕಿಟ್ ಪ್ರಾಯೋಜಕರಾಗಿ ಅಡಿಡಾಸ್ ಐದು ವರ್ಷಗಳ ಕಾಲ ಮುಂದುವರಿಯಲಿದೆ. ಪ್ರಮುಖ ಪ್ರಾಯೋಜಕರ ಸೇರ್ಪಡೆಯೊಂದಿಗೆ, ಅಡಿಡಾಸ್ ಮತ್ತು ಹೊಸ ಬ್ರಾಂಡ್ನ ಹೆಸರು ಆಟಗಾರರ ಜೆರ್ಸಿಯಲ್ಲಿ ಮಿಂಚಲಿದೆ.
ಕೆಲವು ಬ್ರಾಂಡ್ ಗಳ ಮೇಲೆ ನಿಷೇಧ ಹೇರಿದ ಬಿಸಿಸಿಐ
ಪ್ರಾಯೋಜಕತ್ವದ ಹಕ್ಕುಗಳಿಗಾಗಿ ಕೆಲವೊಂದು ಬ್ರಾಂಡ್ಗಳನ್ನು ಬಿಸಿಸಿಐ ನಿಷೇಧಿಸಿದೆ. ಈ ಬ್ರಾಂಡ್ಗಳ ಟೀಮ್ ಇಂಡಿಯಾದ ಶೀರ್ಷಿಕೆ ಪ್ರಾಯೋಜಕರಾಗಲು ಬಿಡ್ ಮಾಡಲು ಸಾಧ್ಯವಿಲ್ಲ. ಕ್ರೀಡಾ ಉಡುಪು ತಯಾರಕರು, ಆಲ್ಕೋಹಾಲ್ ಉತ್ಪನ್ನಗಳು, ಬೆಟ್ಟಿಂಗ್ ಕಂಪನಿಗಳು, ಕ್ರಿಪ್ಟೋಕರೆನ್ಸಿ ಘಟಕಗಳು, ರಿಯಲ್ ಮನಿ ಗೇಮಿಂಗ್ ಪ್ಲಾಟ್ಫಾರ್ಮ್ಗಳು (ಫ್ಯಾಂಟಸಿ ಸ್ಪೋರ್ಟ್ಸ್ ಗೇಮಿಂಗ್ ಹೊರತುಪಡಿಸಿ), ತಂಬಾಕು ಬ್ರಾಂಡ್ಗಳು, ಅಶ್ಲೀಲತೆ ಅಥವಾ ಸಾರ್ವಜನಿಕ ನೈತಿಕ ಅಪರಾಧದಂತಹ ಆಕ್ರಮಣಕಾರಿ ವಿಷಯಗಳಿಗೆ ಸಂಬಂಧಿಸಿದ ಉತ್ಪನ್ನಗಳಿಗೆ ಅವಕಾಶ ಇಲ್ಲ.