May 8, 2026
Friday, May 8, 2026
spot_img

ಹನಿ-ಟ್ರಾಪ್ ತಡೆಯಲು ಬಿಸಿಸಿಐ ಮಾಸ್ಟರ್ ಪ್ಲ್ಯಾನ್ : ಆಟಗಾರರ ಹೊಟೇಲ್ ರೂಮ್‌ ಮೇಲೆ ಇನ್ಮುಂದೆ ಸರ್ಪ್ರೈಸ್ ರೈಡ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಸಿಸಿಐ, 2026ರ ಐಪಿಎಲ್‌ನ ಎಲ್ಲಾ 10 ಫ್ರಾಂಚೈಸಿಗಳಿಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆಟಗಾರರ ಹೊಟೇಲ್‌ ರೂಮ್‌ಗಳನ್ನು ಇದ್ದಕ್ಕಿದ್ದಂತೆಯೇ ಚೆಕ್‌ ಮಾಡುವ ನಿಯಮವನ್ನು ಕೂಡ ಬಿಸಿಸಿಐ ಅಳವಡಿಸಿಕೊಂಡಿದೆ. ಆಟಗಾರರನ್ನು ಗುರಿಯಾಗಿಸಿಕೊಂಡು ನಡೆಯುವ ‘ಹನಿ-ಟ್ರಾಪ್’ ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳಿಂದ ಆಟಗಾರರನ್ನು ಹಾಗೂ ಐಪಿಎಲ್‌ ಘನತೆಯನ್ನು ಕಾಪಾಡುವುದು ಈ ಹೊಸ ನಿಯಮಗಳ ಮುಖ್ಯ ಉದ್ದೇಶವಾಗಿದೆ.

ಬಿಸಿಸಿಐ ಜಾರಿಗೆ ತಂದ ಹೊಸ ಮಾರ್ಗಸೂಚಿಗಳು:

ಆಟಗಾರರ ಹೋಟೆಲ್ ಕೊಠಡಿಗಳಿಗೆ ಬಿಸಿಸಿಐ ಮತ್ತು ಐಪಿಎಲ್ ಕಾರ್ಯಾಚರಣಾ ತಂಡವು ಯಾವುದೇ ಮುನ್ಸೂಚನೆ ಇಲ್ಲದೆ ತಪಾಸಣೆ ನಡೆಸಬಹುದು. ಯಾರಾದರೂ ಬೇರೆ ವ್ಯಕ್ತಿಗಳು ಕೊಠಡಿಯಲ್ಲಿ ಕಂಡುಬಂದಲ್ಲಿ ಕಠಿಣ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ.

ತಂಡದ ಮ್ಯಾನೇಜರ್ ಪೂರ್ವಾನುಮತಿ ಇಲ್ಲದೆ ಯಾವುದೇ ಹೊರಗಿನ ವ್ಯಕ್ತಿ ಆಟಗಾರರ ಅಥವಾ ಸಿಬ್ಬಂದಿಯ ಕೊಠಡಿ ಪ್ರವೇಶಿಸುವಂತಿಲ್ಲ.

ಆಟಗಾರರು ವೈಯಕ್ತಿಕ ಕೆಲಸಗಳಿಗಾಗಿ ಹೋಟೆಲ್‌ನಿಂದ ಹೊರಹೋಗಬೇಕಾದರೆ, ಆ ಬಗ್ಗೆ ತಂಡದ ಮ್ಯಾನೇಜರ್, ಭದ್ರತಾ ಅಧಿಕಾರಿ ಮತ್ತು ‘ಟೀಮ್ ಇಂಟೆಗ್ರಿಟಿ ಆಫೀಸರ್’ಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಹಗಲು ಅಥವಾ ರಾತ್ರಿ ಯಾವುದೇ ಸಮಯದಲ್ಲಿ ಹೋಟೆಲ್‌ನಿಂದ ಹೊರಡುವ ಮೊದಲು ಅನುಮತಿ ಪಡೆಯುವುದು ಅತ್ಯಗತ್ಯ.

ಪಂದ್ಯದ ಸಮಯದಲ್ಲಿ ಫ್ರಾಂಚೈಸಿ ಮಾಲೀಕರು ಡಗೌಟ್‌ನಲ್ಲಿರುವ ಆಟಗಾರರು ಅಥವಾ ತಂಡದ ವ್ಯವಸ್ಥಾಪಕರೊಂದಿಗೆ ಮಾತನಾಡುವುದನ್ನು ನಿರ್ಬಂಧಿಸಲಾಗಿದೆ.

ಅತಿಥಿಗಳ ಭೇಟಿ ಮತ್ತು ಆಟಗಾರರ ಪ್ರತಿಯೊಂದು ಚಲನವಲನದ ವಿವರವಾದ ದಾಖಲೆಯನ್ನು ತಂಡದ ಮ್ಯಾನೇಜರ್‌ಗಳು ನಿರ್ವಹಿಸಬೇಕು.

ಇನ್ನು, ಈ ನಿಯಮಗಳ ಉಲ್ಲಂಘನೆಯನ್ನು ಗಂಭೀರ ಅಪರಾಧ ಎಂದು ಪರಿಗಣಿಸಲಾಗಿದ್ದು, ನಿಯಮ ಮೀರಿದವರಿಗೆ ಭಾರೀ ಮೊತ್ತದ ದಂಡ ವಿಧಿಸಬಹುದು, ಸ್ಪರ್ಧೆಯಿಂದ ಅಮಾನತುಗೊಳಿಸಬಹುದು ಅಥವಾ ಟೂರ್ನಿಯಿಂದಲೇ ಅನರ್ಹಗೊಳಿಸಬಹುದು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !