ಹೊಸದಿಗಂತ ಡಿಜಿಟಲ್ ಡೆಸ್ಕ್:
2008ರ ಮುಂಬೈ ದಾಳಿಯ ನಂತರ ಮೊದಲ ಬಾರಿಗೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಯೋಗವು ಪಾಕಿಸ್ತಾನಕ ಪ್ರವಾಸ ಕೈಗೊಳ್ಳಲಿದೆ. ಬಿಸಿಸಿಐ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸೆಪ್ಟೆಂಬರ್ 4 ರಂದು ಲಾಹೋರ್ಗೆ ತೆರಳಲಿದ್ದಾರೆ. ಹಾಗೆಯೇ ಎರಡು ಏಷ್ಯಾ ಕಪ್ ಪಂದ್ಯಗಳನ್ನು ವೀಕ್ಷಿಸಲು 7ನೇ ತಾರೀಖಿನವರೆಗೆ ಅಲ್ಲಿಯೇ ಇರುತ್ತಾರೆ.
2008ರ ಮುಂಬೈ ಭಯೋತ್ಪಾದನಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ 15 ವರ್ಷಗಳ ನಂತರ ಪಾಕಿಸ್ತಾನದ ಆಹ್ವಾನದ ಮೇರೆಗೆ, BCCI ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಪಾಕಿಸ್ತಾನಕ್ಕೆ ಭೇಟಿ ನೀಡಿ ಏಷ್ಯಾ ಕಪ್ ಪಂದ್ಯಗಳನ್ನು ವೀಕ್ಷಿಸಲಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಬಿಸಿಸಿಐ ಮತ್ತು ಪಿಸಿಬಿ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಇತ್ತು. ಸೆಪ್ಟೆಂಬರ್ 4 ರಂದು ಲಾಹೋರ್ನ ಗವರ್ನರ್ ಹೌಸ್ನಲ್ಲಿ ಪಿಸಿಬಿಯ ಅಧಿಕೃತ ಔತಣಕೂಟದಲ್ಲಿ ಬಿನ್ನಿ ಮತ್ತು ಶುಕ್ಲಾ ಇಬ್ಬರೂ ತಮ್ಮ ಸಂಗಾತಿಗಳೊಂದಿಗೆ ಭಾಗವಹಿಸಲಿದ್ದಾರೆ. ಇಬ್ಬರು ಬಿಸಿಸಿಐ ದಿಗ್ಗಜರು ಸೆಪ್ಟೆಂಬರ್ 5 ರಂದು ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಪಂದ್ಯವನ್ನು ಮತ್ತು ಮರುದಿನ ಪಾಕಿಸ್ತಾನದ ಆರಂಭಿಕ ಸೂಪರ್ ಫೋರ್ ಪಂದ್ಯವನ್ನು ವೀಕ್ಷಿಸಲಿದ್ದಾರೆ.