ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆಗಾಲ ಬಂತೆಂದರೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಒಂದೆಡೆ ಮಳೆಯಾದರೆ ಮತ್ತೊಂದೆಡೆ ಗುಡುಗು ಮಿಂಚುಗಳ ಹಾವಳಿ. ಈ ಸಂದರ್ಭದಲ್ಲಿ ವಿದ್ಯುತ್ ಪರಿಕರಗಳನ್ನು ಮನೆಯಲ್ಲಿ ಬಳಸುವುದೇ ಕಷ್ಟ.
ಮನೆಯೊಳಗಿರುವ ಪವರ್ ಪ್ಲಗ್, ಐರನ್ ಬಾಕ್ಸ್, ಫ್ರಿಡ್ಜ್, ವಾಷಿಂಗ್ ಮಿಷನ್, ಇನ್ವರ್ಟರ್ ಎಲ್ಲವನ್ನು ಕಡ್ಡಾಯವಾಗಿ ವಿದ್ಯುತ್ ಸಂಪರ್ಕದಿಂದ ಕಡಿತಗೊಳಿಸುವ ಅನಿವಾರ್ಯವಿದೆ. ಇಲ್ಲದಿದ್ದಲ್ಲಿ ವಿದ್ಯುತ್ ಪ್ರವಾಹ ಅತಿಯಾಗಿ ಶಾಕ್ ಹೊಡೆಯುವ, ಸುಟ್ಟುಹೋಗುವ ಭಯ ಕಾಡುತ್ತಿರುತ್ತವೆ. ಕೆಲವೊಂದು ಮನೆಗಳಲ್ಲಿ ನೆಲದಲ್ಲಿ ನಿಲ್ಲುವುದು ಕಷ್ಟ ಎಂಬಂತಹ ಪರಿಸ್ಥಿತಿ.
ಮನೆಯೊಳಗೆ ವೈರಿಂಗ್ ಹೋಗಿರುವ ಗೋಡೆಗಳನ್ನು ಮುಟ್ಟುವುದು ಕಷ್ಟ ಎಂಬ ಸ್ಥಿತಿ ಅನೇಕ ಮನೆಗಳಲ್ಲಿರುತ್ತವೆ. ಇವೆಲ್ಲದಕ್ಕು ಪ್ರಮುಖ ಕಾರಣ ಸರಿಯಾದ ರೀತಿಯ ವಯರಿಂಗ್ ವ್ಯವಸ್ಥೆ ಇಲ್ಲದಿರುವುದು, ವಿದ್ಯುತ್ ಸೋರಿಕೆಯಾಗುತ್ತಿರುವುದು. ಮಳೆಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಅಧಿಕವಾಗಿರುವುದರಿಂದ ಎಲ್ಲೆಡೆ ತೇವಾಂಶ ಕಂಡುಬರುತ್ತದೆ. ಹಾಗಾಗಿ ವಿದ್ಯುತ್ ಸೋರಿಕೆಯಾದಂತೆಲ್ಲ ತೇವಾಂಶದ ಮೂಲಕ ಪ್ರವಾಹವಾಗಿ ಶಾಕ್ ತಗಲುವ ಸಾಧ್ಯತೆಯಿರುತ್ತದೆ. ಮನೆಯ ವಯರಿಂಗ್ ನಲ್ಲಿ ಅರ್ಥಿಂಗ್ ಸಮರ್ಪಕವಾಗಿದೆಯೋ ಎಂಬುದು ಅತೀ ಮುಖ್ಯ. ಅರ್ಥಿಂಗ್ ಸಮಸ್ಯೆ ಇದ್ದರೆ ಕಂಪ್ಯೂಟರ್, ಫ್ರಿಡ್ಜ್, ವಾಷಿಂಗ್ ಮಿಷಿನ್ ನಂತಹ ಪ್ರಮುಖ ಪರಿಕರಗಳನ್ನು ಖಂಡಿತಾ ಬಳಸುವಂತಿಲ್ಲ.
ಶಾಕ್ ಬರುವ ಪ್ರದೇಶದಲ್ಲಿ ವಿದ್ಯುತ್ ಲೈನ್ ಪರಿಶೀಲಿಸಿ ದುರಸ್ತಿಪಡಿಸುವುದು ಅತೀ ಅವಶ್ಯ. ಮನೆಯೊಳಗಿನ ವಿದ್ಯುತ್ ವಯರಿಂಗ್ ಅನ್ನು ನಿಯಮಿತವಾಗಿ ಪರಿಶೀಲಿಸುತ್ತಾ ದುರಸ್ತಿ ಕಾರ್ಯ ಮಾಡುವುದರಿಂದ ತೊಂದರೆ ತಪ್ಪಿಸಬಹುದು.