ಸಮೋಸಾ, ಜಿಲೇಬಿ, ವಡಾ ಪಾವ್ ತಿನ್ನುವ ಮುನ್ನ ಗಮನಿಸಿ: ತಿಂಡಿ ಪ್ರಿಯರಿಗೆ ಶಾಕ್ ಕೊಟ್ಟ ಕೇಂದ್ರ ಸರ್ಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕೇಂದ್ರ ಸರ್ಕಾರ ಅನಾರೋಗ್ಯಕರ ಆಹಾರದ ಬಗ್ಗೆ ಜಾಗೃತಿ ಮೂಡಿಸುವ ಪ್ರಮುಖ ಕ್ರಮದಲ್ಲಿ ಮುಂದಾಗಿದ್ದು, ಸಮೋಸಾ, ಜಿಲೇಬಿ, ಪಕೋಡಾ, ವಡಾ ಪಾವ್ ಮತ್ತು ಬಿಸ್ಕತ್ತುಗಳಂತಹ ಜನಪ್ರಿಯ ತಿಂಡಿಗಳ ಬಗ್ಗೆ ಜನರಿಗೆ ಅದರ ಆರೋಗ್ಯ ಸಮಸ್ಯೆಗಳನ್ನು ತಿಳಿಸಬೇಕೆಂಬ ಕಾರಣದಿಂದ ಶೀಘ್ರದಲ್ಲೇ ಸಿಗರೇಟ್ ರೀತಿಯ ಆರೋಗ್ಯ ಅಲರ್ಟ್​ಗಳನ್ನು ನೀಡಲಿದೆ.

ಯಾವ ರೀತಿ ತಂಬಾಕು ಉತ್ಪನ್ನಗಳ ಮೇಲೆ ಆರೋಗ್ಯಕ್ಕೆ ಅಪಾಯಕಾರಿ ಎಂಬ ಅಲರ್ಟ್ ಇರುತ್ತದೆಯೋ ಅದೇ ರೀತಿ ಈ ಎಲ್ಲ ತಿಂಡಿಗಳ ಬಗ್ಗೆ ಸರ್ಕಾರಿ ಕ್ಯಾಂಟೀನ್ ಮತ್ತು ರೆಸ್ಟೋರೆಂಟ್​​ಗಳಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಜೀವನಶೈಲಿಯ ಕಾಯಿಲೆಗಳಿಗೆ ನಿಕಟ ಸಂಬಂಧ ಹೊಂದಿರುವ ಈ ಆಹಾರಗಳಲ್ಲಿ ಎಣ್ಣೆ, ಸಕ್ಕರೆ ಮತ್ತು ಟ್ರಾನ್ಸ್ ಕೊಬ್ಬಿನ ಹೆಚ್ಚಿನ ಮಟ್ಟ ಇರುತ್ತದೆ. ಈ ಅಭಿಯಾನವನ್ನು ಮೊದಲು ನಾಗ್ಪುರದಲ್ಲಿ ಪ್ರಾರಂಭಿಸಲಾಗುತ್ತಿದೆ. ಅಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS ನಾಗ್ಪುರ) ಈ ಉಪಕ್ರಮದ ಆರಂಭಿಕ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ. ಈ ಕ್ಯಾಂಪಸ್‌ನಲ್ಲಿರುವ ಕೆಫೆಟೇರಿಯಾಗಳು ಮತ್ತು ಸಾರ್ವಜನಿಕ ಊಟದ ಸ್ಥಳಗಳು, ಫುಡ್ ಕೌಂಟರ್‌ಗಳ ಪಕ್ಕದಲ್ಲಿ ಈ ಎಚ್ಚರಿಕೆ ಫಲಕಗಳನ್ನು ಪ್ರದರ್ಶಿಸಲಾಗುತ್ತದೆ.

ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಗಳು ಹೆಚ್ಚುತ್ತಿರುವುದರಿಂದ ಕೇಂದ್ರ ಸರ್ಕಾರವು ಜನರು ತಮ್ಮ ತಟ್ಟೆಯಲ್ಲಿ ಏನಿದೆ ಎಂಬುದರತ್ತ ಗಮನ ಹರಿಸಬೇಕೆಂದು ಒತ್ತಾಯಿಸುತ್ತಿದೆ. ಕರಿದ ಮತ್ತು ಸಕ್ಕರೆ ತಿಂಡಿಗಳ ಸೇವನೆಯು ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿದೆ.

2050ರ ವೇಳೆಗೆ ಅಂದಾಜು 440 ಮಿಲಿಯನ್ ಭಾರತೀಯರು ಅಧಿಕ ತೂಕ ಅಥವಾ ಬೊಜ್ಜು ಹೊಂದಿರಬಹುದು ಎಂದು ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಜಾಗತಿಕ ವಿಶ್ಲೇಷಣೆ ಅಂದಾಜಿಸಿದೆ. ಹೀಗಾಗಿ, ಜನರ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

AIIMS ನಾಗ್ಪುರದಂತಹ ಸರ್ಕಾರಿ ಸ್ಥಳಗಳ ರೆಸ್ಟೋರೆಂಟ್, ಕ್ಯಾಂಟೀನ್​ಗಳಲ್ಲಿ ದೊಡ್ಡದಾದ ಎಚ್ಚರಿಕೆ ಪೋಸ್ಟರ್‌ಗಳು, ಸಕ್ಕರೆ, ಕೊಬ್ಬು ಮತ್ತು ಟ್ರಾನ್ಸ್ ಕೊಬ್ಬಿನ ಅಂಶದ ಬಗ್ಗೆ ಸ್ಪಷ್ಟ ಮಾಹಿತಿ, ಪದೇ ಪದೇ ಅದರ ಸೇವನೆಯಿಂದ ಉಂಟಾಗುವ ದೀರ್ಘಕಾಲೀನ ಆರೋಗ್ಯ ಅಪಾಯಗಳನ್ನು ವಿವರಿಸುವ ಸಂದೇಶಗಳನ್ನು ಹಾಕಲಾಗುವುದು. ಈ ಎಚ್ಚರಿಕೆಗಳನ್ನು ಸಿಗರೇಟ್ ಪ್ಯಾಕೇಜಿಂಗ್‌ನಲ್ಲಿನ ಎಚ್ಚರಿಕೆಗಳಂತೆಯೇ ನೇರ ಮತ್ತು ಪ್ರಭಾವಶಾಲಿಯಾಗಿ ವಿನ್ಯಾಸಗೊಳಿಸಲಾಗಿದೆ. ಹಾಗಂತ ಈ ಜಿಲೇಬಿ, ಪಕೋಡದಂತಹ ತಿಂಡಿಗಳನ್ನು ಸರ್ಕಾರ ನಿಷೇಧಿಸಿಲ್ಲ. ಅದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಈ ಆಹಾರಗಳ ಮೇಲೆ ನಿರ್ಬಂಧವಲ್ಲ, ಇವುಗಳ ಮಿತವಾದ ಸೇವನೆಯನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಎಚ್ಚರಿಕೆ ಲೇಬಲ್ ಅಭಿಯಾನವು ಮುಂಬರುವ ತಿಂಗಳುಗಳಲ್ಲಿ ಇತರ ನಗರಗಳು ಮತ್ತು ಸಂಸ್ಥೆಗಳಿಗೆ ವಿಸ್ತರಿಸುವ ನಿರೀಕ್ಷೆಯಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!