ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆಲಮಂಗಲ ಮತ್ತು ಡಾಬಸ್‌ಪೇಟೆ ಪರಿಸರದಲ್ಲಿ ಮೊಬೈಲ್ ಸ್ನ್ಯಾಚರ್‌ಗಳ ಗ್ಯಾಂಗ್ ಸಕ್ರಿಯವಾಗಿದ್ದು, ಪಾದಾಚಾರಿಗಳು ಭೀತಿಯಲ್ಲಿ ಓಡಾಡುವಂತಾಗಿದೆ.
ಇತ್ತೀಚೆಗೆ ಬಿಲ್ಲಿನಕೋಟೆ ಗ್ರಾಮದಲ್ಲಿ ನಡೆದ ಘಟನೆಯೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಪಾದಾಚಾರಿಯೊಬ್ಬರು ರಸ್ತೆ ಬದಿಯಲ್ಲಿ ಫೋನ್‌ನಲ್ಲಿ ಮಾತನಾಡುತ್ತಾ ನಿಂತಿದ್ದಾಗ, ಬೈಕ್‌ನಲ್ಲಿ ಮಿಂಚಿನ ವೇಗದಲ್ಲಿ ಬಂದ ಕಳ್ಳರು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಇಡೀ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳರ ಕೈಚಳಕ ಕಂಡು ಜನ ಬೆಚ್ಚಿಬಿದ್ದಿದ್ದಾರೆ.
ಹೆದ್ದಾರಿ ಬದಿ ಅಥವಾ ಜನಸಂದಣಿ ಕಡಿಮೆ ಇರುವ ಕಡೆಗಳಲ್ಲಿ ಮೊಬೈಲ್ ಹಿಡಿದು ನಡೆಯುವವರನ್ನೇ ಈ ಗ್ಯಾಂಗ್ ಗುರಿಯಾಗಿಸಿಕೊಂಡಿದೆ. ಬೈಕ್ ಸವಾರರು ಹತ್ತಿರ ಬರುತ್ತಿದ್ದಂತೆಯೇ ಎಚ್ಚೆತ್ತುಕೊಳ್ಳುವ ಮೊದಲೇ ನಿಮ್ಮ ಕೈಯಿಂದ ಫೋನ್ ಮಾಯವಾಗಿರುತ್ತದೆ. ಸಾರ್ವಜನಿಕರು ರಸ್ತೆ ಬದಿ ಸಂಚರಿಸುವಾಗ ಹಾಗೂ ಮೊಬೈಲ್ ಬಳಸುವಾಗ ಹೆಚ್ಚಿನ ಜಾಗರೂಕತೆ ವಹಿಸುವುದು ಇಂದಿನ ಅಗತ್ಯವಾಗಿದೆ.

