ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯಲ್ಲಿ ಕುಡಿದು ವಾಹನ ಚಲಾಯಿಸುವವರ ವಿರುದ್ಧ ಸಂಚಾರಿ ಪೊಲೀಸರು ಮತ್ತು ಸಾರಿಗೆ ಇಲಾಖೆ ಚಾಟಿ ಬೀಸಿದೆ. ಕಳೆದ ವರ್ಷ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದಿದ್ದ ಒಟ್ಟು 11,500 ಚಾಲಕರ ಪರವಾನಗಿಯನ್ನು ಆರ್‌ಟಿಒ ಅಧಿಕಾರಿಗಳು ಅಧಿಕೃತವಾಗಿ ರದ್ದುಗೊಳಿಸಿದ್ದಾರೆ.
ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದಿದ್ದ ಒಟ್ಟು 12,900 ಚಾಲಕರ ಡಿಎಲ್ ರದ್ದು ಮಾಡುವಂತೆ ಸಂಚಾರಿ ಪೊಲೀಸರು ಸಾರಿಗೆ ಇಲಾಖೆಗೆ ಪತ್ರ ಬರೆದಿದ್ದರು.
ಈ ಪೈಕಿ ಪ್ರಾಥಮಿಕ ಹಂತದಲ್ಲಿ 11,500 ಪರವಾನಗಿಗಳನ್ನು ರದ್ದು ಮಾಡಲಾಗಿದ್ದು, ಉಳಿದ ಪ್ರಕರಣಗಳ ಪರಿಶೀಲನೆ ನಡೆಯುತ್ತಿದೆ ಎಂದು ಸಂಚಾರ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಇತ್ತೀಚೆಗೆ ಶಾಲಾ ವಾಹನ ಚಾಲಕರು ಮದ್ಯಪಾನ ಮಾಡುತ್ತಿರುವ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ನಗರದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು.
ಒಟ್ಟು 5,110 ಶಾಲಾ ವಾಹನಗಳನ್ನು ತಪಾಸಣೆ ನಡೆಸಿದಾಗ, 26 ಚಾಲಕರು ಮದ್ಯಪಾನ ಮಾಡಿರುವುದು ದೃಢಪಟ್ಟಿದೆ. ಇವರ ವಿರುದ್ಧ ಭಾರತೀಯ ಮೋಟಾರ್ ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಡಿಎಲ್ ರದ್ದತಿಗೆ ವರದಿ ನೀಡಲಾಗಿದೆ.
ಒಂದು ವೇಳೆ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯ ಕಂಡುಬಂದಲ್ಲಿ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಪದೇ ಪದೇ ತಪ್ಪು ಮಾಡುವ ಚಾಲಕರಿಗೆ ಇನ್ಮುಂದೆ ರಸ್ತೆಯಲ್ಲಿ ಜಾಗವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಕ್ರಮ ಸಾರಿದೆ.


