ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸ್ಥಳಗಳನ್ನು ಖಾಸಗಿ ಪಾರ್ಕಿಂಗ್ ಆಗಿ ಮಾಡಿಕೊಳ್ಳುವವರ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಠಿಣ ಕ್ರಮಕ್ಕೆ ಮುಂದಾಗಿದೆ. ರಾಜಧಾನಿಯಲ್ಲಿ 1 ಕೋಟಿಗೂ ಹೆಚ್ಚು ವಾಹನಗಳಿರುವ ಪರಿಸ್ಥಿತಿಯಲ್ಲಿ, ಸಾವಿರಾರು ಅನುಪಯುಕ್ತ ವಾಹನಗಳು ರಸ್ತೆಬದಿಯಲ್ಲಿ ಬಿಟ್ಟುಹೋಗಿರುವುದು ಸಂಚಾರಕ್ಕೂ, ಪಾದಚಾರಿಗಳಿಗೆಗೂ ದೊಡ್ಡ ತೊಂದರೆ ಉಂಟುಮಾಡುತ್ತಿದೆ. ಇದನ್ನು ಸರಿಪಡಿಸಲು ಜಿಬಿಎ ಮತ್ತು ಸಂಚಾರಿ ಪೊಲೀಸರು ಸಂಯುಕ್ತ ಆಪರೇಷನ್ ಆರಂಭಿಸುತ್ತಿದ್ದು, ಗುರುತಿಸಲಾದ ವಾಹನಗಳನ್ನು ಟೋಯಿಂಗ್ ಮಾಡಿ ಹರಾಜು ಅಥವಾ ಸ್ಕ್ರ್ಯಾಪ್‌ಗೆ ಕಳುಹಿಸುವ ನಿರ್ಧಾರ ಕೈಗೊಂಡಿದೆ.
ನಗರದ ಮುಖ್ಯ ರಸ್ತೆಗಳು ಹಾಗೂ ರೆಸಿಡೆನ್ಶಿಯಲ್ ಪ್ರದೇಶಗಳಲ್ಲಿನ ಮನೆ ಮುಂದೆ ನಿಂತಿರುವ ಅನೇಕ ವಾಹನಗಳು ಟ್ರಾಫಿಕ್ ಜಾಮ್‌ಗಳಿಗೆ ಕಾರಣವಾಗಿವೆ. ಪಾರ್ಕಿಂಗ್ ಲಾಟ್ ಇಲ್ಲದಿದ್ದರೂ ಮೂರ್ನಾಲ್ಕು ಕಾರುಗಳನ್ನು ರಸ್ತೆಯಲ್ಲೇ ಪಾರ್ಕ್ ಮಾಡುವವರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಜಿಬಿಎ ಈ ದೂರುಗಳಿಗೆ ಸ್ಪಂದಿಸಿ, ಮೊದಲ ಹಂತದಲ್ಲೇ ಕೇಂದ್ರ ಭಾಗದಲ್ಲಿನ 10 ಸಾವಿರಕ್ಕೂ ಅಧಿಕ ವಾಹನಗಳನ್ನು ಸೀಜ್ ಮಾಡಲು ಪ್ಲಾನ್ ಮಾಡಿದೆ. ಬಳಕೆಗೆ ಯೋಗ್ಯವಾದ ವಾಹನಗಳನ್ನು ಹರಾಜಿಗೆ ಹಾಕಲಾಗುತ್ತಿದ್ದು, ಅನುಪಯುಕ್ತವಾದವುಗಳನ್ನು ನೇರವಾಗಿ ಗುಜುರಿಗೆ ಕಳುಹಿಸಲಾಗುತ್ತದೆ.
ಸಾರ್ವಜನಿಕ ರಸ್ತೆಗಳನ್ನೇ ಪಾರ್ಕಿಂಗ್ ಲಾಟ್ ಮಾಡಿಕೊಂಡವರಿಗೆ ಇದು ಶಾಕ್ ನೀಡಿದ್ದು, ಹೊಸ ನಿಯಮದ ನಂತರ ನಗರದಲ್ಲಿ ಸಂಚಾರ ಒತ್ತಡ ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.

