ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಹೋಟೆಲ್, ರೆಸಾರ್ಟ್‌ಗಳಲ್ಲಿ ಪಾರ್ಟಿ ಸಿದ್ಧತೆ ಜೋರಾಗಿರುವಂತೆಯೇ, ಹಲವರು ಮನೆಯಲ್ಲೇ ಸ್ನೇಹಿತರೊಂದಿಗೆ ಆಚರಣೆ ಮಾಡಲು ಮುಂದಾಗುತ್ತಿದ್ದಾರೆ. ಆದರೆ ಸಂಭ್ರಮದ ತಯಾರಿಯ ಜೊತೆಗೆ ಮದ್ಯಕ್ಕೆ ಸಂಬಂಧಿಸಿದ ಕಾನೂನು ತಿಳಿದಿರದಿದ್ದರೆ, ಕ್ಷಣಿಕ ಖುಷಿ ದೊಡ್ಡ ಕಾನೂನು ತೊಂದರೆಗೆ ದಾರಿ ಮಾಡಿಕೊಡಬಹುದು.
ಭಾರತದಲ್ಲಿ ಮದ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಸರ್ಕಾರವಲ್ಲ, ಪ್ರತ್ಯೇಕ ರಾಜ್ಯ ಸರ್ಕಾರಗಳು ನಿಗದಿಪಡಿಸುತ್ತವೆ. ಸಂವಿಧಾನದ ಏಳನೇ ಪಟ್ಟಿ ಪ್ರಕಾರ ಅಬಕಾರಿ ವಿಷಯ ಸಂಪೂರ್ಣವಾಗಿ ರಾಜ್ಯಗಳ ಅಧೀನದಲ್ಲಿದೆ. ಇದರಿಂದಾಗಿ ಒಂದು ರಾಜ್ಯದಲ್ಲಿ ಅನುಮತಿಸಿರುವ ಮದ್ಯ ಪ್ರಮಾಣ ಮತ್ತೊಂದು ರಾಜ್ಯದಲ್ಲಿ ಅಪರಾಧವಾಗುವ ಸಾಧ್ಯತೆ ಇದೆ. ಅನೇಕ ರಾಜ್ಯಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಮದ್ಯವನ್ನು ಮನೆಯಲ್ಲಿ ಇಟ್ಟುಕೊಂಡರೆ ದಂಡದ ಜೊತೆಗೆ ಜೈಲು ಶಿಕ್ಷೆಯೂ ಎದುರಾಗಬಹುದು.
ಕೆಲವು ರಾಜ್ಯಗಳಲ್ಲಿ ಮದ್ಯ ಸಂಪೂರ್ಣ ನಿಷೇಧದಲ್ಲಿದೆ. ಬಿಹಾರ, ಗುಜರಾತ್, ನಾಗಾಲ್ಯಾಂಡ್, ಮಿಜೋರಾಂ ಮತ್ತು ಲಕ್ಷದ್ವೀಪದಲ್ಲಿ ಮದ್ಯಪಾನ ಹಾಗೂ ಸಂಗ್ರಹ ಎರಡೂ ಗಂಭೀರ ಅಪರಾಧಗಳಾಗಿವೆ. ಇದಕ್ಕೆ ವಿರುದ್ಧವಾಗಿ, ದೆಹಲಿ, ಕರ್ನಾಟಕ, ಗೋವಾ, ಹರಿಯಾಣ, ಉತ್ತರ ಪ್ರದೇಶ, ಪಂಜಾಬ್, ಕೇರಳ ಮತ್ತು ಜಮ್ಮು–ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಲ್ಲಿ ನಿರ್ದಿಷ್ಟ ಪ್ರಮಾಣದವರೆಗೆ ಮದ್ಯವನ್ನು ಇಟ್ಟುಕೊಳ್ಳಲು ಅವಕಾಶವಿದೆ. ಆದರೆ ಈ ಮಿತಿಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.
ದೆಹಲಿಯಲ್ಲಿ ಮದ್ಯಕ್ಕೆ ಸಂಬಂಧಿಸಿದಂತೆ 25 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಯು ಮನೆಯಲ್ಲಿ ಬಿಯರ್ ಮತ್ತು ವೈನ್ ಸೇರಿದಂತೆ 18 ಲೀಟರ್ ವರೆಗೆ ಮದ್ಯವನ್ನು ಹೊಂದಿರಬಹುದು. ರಮ್, ವಿಸ್ಕಿ, ವೋಡ್ಕಾ ಅಥವಾ ಜಿನ್ ನಂತಹ ಹಾರ್ಡ್ ಡ್ರಿಂಕ್ಸ್ ಮಿತಿ 9 ಲೀಟರ್. ಒಂದೇ ಮನೆಯಲ್ಲಿ ವಾಸಿಸುವ ಎಲ್ಲಾ ವಯಸ್ಕರು ತಮ್ಮ ಮಿತಿಯೊಳಗೆ ಮದ್ಯವನ್ನು ಹೊಂದಿರಬಹುದು ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಇನ್ನು ಕರ್ನಾಟಕದಲ್ಲಿ18.2 ಲೀಟರ್ ಕಂಟ್ರಿ ಬಿಯರ್, 9.1 ಲೀಟರ್ ಆಮದು ಮಾಡಿಕೊಂಡ ವಿದೇಶಿ ಮದ್ಯ, 4.5 ಲೀಟರ್ ಫೋರ್ಟಿಫೈಡ್ ವೈನ್, 9 ಲೀಟರ್ ಫ್ರೂಟ್ ವೈನ್ ಅನುಮತಿಸಲಾಗಿದೆ.
ಹೀಗಾಗಿ ಹೊಸ ವರ್ಷದ ಸಂಭ್ರಮಕ್ಕೆ ಮುನ್ನ, ತಮ್ಮ ರಾಜ್ಯದ ಅಬಕಾರಿ ನಿಯಮಗಳನ್ನು ಪರಿಶೀಲಿಸುವುದು ಅತ್ಯಂತ ಅಗತ್ಯ. ಸಂಭ್ರಮ ಕ್ಷಣಿಕವಾದರೂ, ಕಾನೂನು ಸಮಸ್ಯೆಗಳು ದೀರ್ಘಕಾಲ ಕಾಡಬಹುದು ಎಂಬುದನ್ನು ಮರೆಯಬಾರದು.

