March 23, 2026
Monday, March 23, 2026
spot_img

ಜಾಗ್ರತೆಯಿಂದಿರಿ, ಮುಂದಿನ ಏಳು ದಿನದಲ್ಲಿ ಬಿಸಿಲು ಇನ್ನೂ ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ತಾಪಮಾನ ಏರಿಕೆಯ ಪ್ರಮಾಣ ದಿನೇ ದಿನೇ ಅಧಿಕವಾಗುತ್ತಿದೆ. ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಏರಿಕೆ ಕಂಡುಬಂದಿದ್ದು, ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದೆ. ರಾಜ್ಯದಲ್ಲಿ ಇಂದು ಗರಿಷ್ಠ ತಾಪಮಾನ 34°Cವರೆಗೂ ಹಾಗೂ ಕನಿಷ್ಠ ತಾಪಮಾನ 22°C ದಾಖಲಾಗಬಹುದು ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಅಲ್ಪ ಮಳೆಯಾಗುವ ಸಾಧ್ಯತೆಯಿದೆ.

ಕಲಬುರಗಿ, ವಿಜಯಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಿರಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದಲ್ಲಿ ಸೆಕೆಯ ಅನುಭವ ಹೆಚ್ಚಿರಲಿದೆ. ಬೆಳಗಾವಿಯಲ್ಲಿ ಬೆಳಗ್ಗೆ ಮತ್ತು ರಾತ್ರಿ ತಂಪು ಹವೆ ಇರಲಿದ್ದು, ಮಧ್ಯಾಹ್ನ ಕೊಂಚ ತಾಪಮಾನ ಏರಿಕೆಯಾಗಲಿದೆ. ಕಲಬುರಗಿಯಲ್ಲಿ ಬಿಸಿ ಗಾಳಿಯ ಎಚ್ಚರಿಕೆ ನೀಡಲಾಗಿದೆ. ಹಾಗೂ ಚಿಕ್ಕಮಗಳೂರು, ಕೊಡಗು ಭಾಗದಲ್ಲಿ ಇತರೆ ಜಿಲ್ಲೆಗಳಿಗಿಂತ ಕೊಂಚ ತಂಪಾದ ವಾತಾವರಣವಿರಲಿದೆ.

ಮುಂದಿನ ಒಂದು ವಾರದ ನಿರೀಕ್ಷಿತ ಹವಾಮಾನ: ಹವಾಮಾನ ಇಲಾಖೆ ಈಗಾಗಲೇ ನೀಡಿರುವ ಮುನ್ಸೂಚನೆಯಂತೆ ಮುಂದಿನ 7 ದಿನಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶವು ಸರಾಸರಿಗಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ. ದಕ್ಷಿಣ ಒಳನಾಡು ಪ್ರದೇಶದಲ್ಲಿ ಹವಾಮಾನವು ಶುಷ್ಕವಾಗಿರಲಿದ್ದು, ಮಧ್ಯಾಹ್ನದ ವೇಳೆ ತೀವ್ರ ಬಿಸಿಲಿರಲಿದೆ. ಉತ್ತರ ಒಳನಾಡಿನ ಕಲಬುರಗಿ, ರಾಯಚೂರುಗಳಲ್ಲಿ‌ ಉಷ್ಣಾಂಶವು 38°C ದಾಟುವ ಸಾಧ್ಯತೆ ಇದೆ. ಬಿಸಿ ಗಾಳಿಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಮಂಗಳೂರು, ಉಡುಪಿಗಳಲ್ಲಿ ಆರ್ದ್ರತೆ ಹೆಚ್ಚಿರಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !