ಇಂಧನದ ಸ್ವಿಚ್‌ ನಿರ್ವಹಿಸುವಾಗ ಜಾಗ್ರತೆ: ಪೈಲಟ್‌ಗಳಿಗೆ ಇತಿಹಾದ್ ಎರ್‌ಲೈನ್ಸ್ ಸೂಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏರ್ ಇಂಡಿಯಾ ವಿಮಾನ ಅಪಘಾತದ ಬಳಿಕ ಏರ್ ಲೈನ್ಸ್ ಗಳು ಎಚ್ಚೆತ್ತಿದ್ದು, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ ದುಬೈನ ಇತಿಹಾದ್ ಎರ್‌ಲೈನ್ಸ್ ಬೋಯಿಂಗ್ 787 ವಿಮಾನಗಳಲ್ಲಿನ ಇಂಧನ ಸ್ವಿಚ್ ಲಾಕ್‌ಗಳನ್ನು ಪರಿಶೀಲಿಸಲು ಮುಂದಾಗಿದೆ. ಬೋಯಿಂಗ್ 787 ಡ್ರೀಮ್‌ಲೈನರ್‌ಗಳ ಲಾಕಿಂಗ್ ಫ್ಲೀಟ್-ವೈಡ್ ತಪಾಸಣೆಗೆ ವಿಮಾನಯಾನ ಸಂಸ್ಥೆ ಆದೇಶಿಸಿದೆ. ಅಲ್ಲದೇ ಪೈಲಟ್‌ಗಳಿಗೆ ಇಂಧನದ ಸ್ವಿಚ್‌ ನಿರ್ವಹಿಸುವಾಗ ಜಾಗ್ರತೆವಹಿಸುವಂತೆ ಸೂಚಿಸಲಾಗಿದೆ.

ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನದ ಎರಡೂ ಎಂಜಿನ್ ಇಂಧನ ನಿಯಂತ್ರಣ ಸ್ವಿಚ್‌ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ‘RUN’ ನಿಂದ ‘CUTOFF’ ಸ್ಥಾನಕ್ಕೆ ಬಂದಿತ್ತು ಎಂದು AAIB ವರದಿ ಬಹಿರಂಗಪಡಿಸಿದೆ. ಈ ಬಗ್ಗೆ ಪೈಲಟ್‌ಗಳ ಸಂಭಾಷಣೆ ಬ್ಲಾಕ್‌ ಬಾಕ್ಸ್‌ನಲ್ಲಿ ರೆಕಾರ್ಡ್‌ ಆಗಿದ್ದು, ನೀವು ಇಂಧನದ ಸ್ವಿಚ್ ಏಕೆ ಆಫ್‌ ಮಾಡಿದ್ದೀರಿ ಎಂದು ಸಹಪೈಲಟ್‌ ಕೇಳಿದ್ದು ದಾಖಲಾಗಿದೆ. ಅಲ್ಲದೇ ಇದಕ್ಕೆ ಉತ್ತರಿಸಿರುವ ಮತ್ತೊಬ್ಬ ಪೈಲಟ್‌ ನಾನು ಆಫ್ ಮಾಡಲಿಲ್ಲ ಎಂದಿದ್ದರು.

ಇದೀಗ ಈ ವರದಿ ಬಿಡುಗಡೆಯಾದ ಬಳಿಕ ಇತಿಹಾದ್ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಇಂಧನ ನಿಯಂತ್ರಣ ಸ್ವಿಚ್‌ಗಳ ಲಾಕಿಂಗ್ ಕಾರ್ಯವಿಧಾನಗಳ ಫ್ಲೀಟ್-ವೈಡ್ ತಪಾಸಣೆಗೆ ಪ್ರತ್ಯೇಕ ಎಂಜಿನಿಯರಿಂಗ್ ಬುಲೆಟಿನ್‌ನ್ನು ಸಹ ಬಿಡುಗಡೆ ಮಾಡಲಾಗಿದೆ.

ದಕ್ಷಿಣ ಕೊರಿಯಾದ (South Korea) ರಸ್ತೆ, ಮೂಲಸೌಕರ್ಯ ಮತ್ತು ಸಾರಿಗೆ ಸಚಿವಾಲಯ (MOLIT) ಬೋಯಿಂಗ್ 787 ವಿಮಾನಗಳನ್ನು ನಿರ್ವಹಿಸುವ ಎಲ್ಲಾ ಕೊರಿಯನ್ ವಿಮಾನಯಾನ ಸಂಸ್ಥೆಗಳಿಗೆ ಇಂಧನ ಸ್ವಿಚ್ ಕಾರ್ಯವಿಧಾನ ಪರಿಶೀಲನೆ ನಡೆಸುವುದು ಕಡ್ಡಾಯ ಎಂದು ಘೋಷಿಸಿದೆ. ಏರ್ ಇಂಡಿಯಾ ಅಪಘಾತದ ಬಳಿಕ ಮತ್ತು 2018ರ FAA ಸುರಕ್ಷತಾ ವರದಿಯ ಎಚ್ಚರಿಕೆಯ ಶಿಫಾರಸುಗಳಿಗೆ ಅನುಗುಣವಾಗಿ ಈ ಪರಿಶೀಲನೆಗೆ ಸೂಚಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!