“ರಕ್ತದಾನ ಶ್ರೇಷ್ಠ ದಾನ” ಎಂಬ ಮಾತು ಕೇವಲ ನುಡಿಮುತ್ತು ಅಲ್ಲ; ಸಾವಿರಾರು ಜೀವಗಳನ್ನು ಉಳಿಸುವ ಶಕ್ತಿಯಿದೆ ಈ ದಾನದ ಹಿಂದೆ. ಒಂದು ಹನಿ ರಕ್ತವು ಆವಶ್ಯಕ ಸಮಯದಲ್ಲಿ ಜೀವ ಉಳಿಸಬಲ್ಲದು. ಹೀಗಾಗಿ, ಸದಾ ಸಿದ್ಧರಾಗಿ ಇರುವ ದಾನಿಗಳು ರಕ್ತದಾನ ಮಾಡುವ ಮುನ್ನ ತಮ್ಮ ದೇಹ ಆರೋಗ್ಯವಂತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯವಶ್ಯಕ. ಅದರಲ್ಲೂ ಆಹಾರ ಸೇವನೆ ಪ್ರಮುಖ ಪಾತ್ರ ವಹಿಸುತ್ತದೆ.
ಬೀಟ್ರೂಟ್ ಸೇವನೆ ಅನಿವಾರ್ಯ
ಬೀಟ್ರೂಟ್‌ನಲ್ಲಿ ನೈಟ್ರೇಟ್ ಮತ್ತು ಕಬ್ಬಿಣಾಂಶ ಹೆಚ್ಚಿನ ಮಟ್ಟದಲ್ಲಿ ಲಭ್ಯವಿದ್ದು, ಇದು ದೇಹದಲ್ಲಿ ಹಿಮೋಗ್ಲೋಬಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ರಕ್ತದಾನ ಮಾಡುವ ಒಂದು ಅಥವಾ ಎರಡು ದಿನಗಳ ಮುಂಚೆ ಬೀಟ್ರೂಟ್ ಸೇವನೆಯಿಂದ ರಕ್ತ ಶುದ್ಧವಾಗುತ್ತದೆ.
ಪ್ರೋಟೀನ್ ನೀಡುವ ಮೊಟ್ಟೆ
ಮೊಟ್ಟೆ ಪ್ರೋಟೀನ್ ಹಾಗೂ ವಿಟಮಿನ್ B12 ನಿಂದ ಸಮೃದ್ಧವಾಗಿದ್ದು, ಇದು ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ರಕ್ತದಾನ ಮಾಡಿದ ನಂತರ ಬರುವ ಆಯಾಸ ಹಾಗೂ ಶಕ್ತಿಯ ಕೊರತೆಯನ್ನು ಈ ಆಹಾರ ತಡೆಯುತ್ತದೆ.
ಪಾಲಕ್ ಸೊಪ್ಪು – ಕಬ್ಬಿಣದ ಶಕ್ತಿ
ಪಾಲಕ್ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣ ಹಾಗೂ ಪೋಲೇಟ್ ಅಂಶವಿದ್ದು, ಇದು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಸಹಕಾರಿಯಾಗುತ್ತದೆ. ದಿನದಿಂದ ದಿನಕ್ಕೆ ಪಾಲಕ್ ಸೇವನೆಯು ದೇಹದ ಶಕ್ತಿ ಮಟ್ಟ ಹೆಚ್ಚಿಸುತ್ತದೆ.
ಕಿತ್ತಳೆ ಹಣ್ಣು – ವಿಟಮಿನ್ ಸಿ ಪವರ್
ವಿಟಮಿನ್ ಸಿ ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಈ ಮೂಲಕ ರಕ್ತಪರಿಚಲನೆಯನ್ನು ಸುಧಾರಿಸಲು ಸಹಕಾರಿಯಾಗುತ್ತದೆ. ರಕ್ತದಾನ ಮಾಡಲು ಸಿದ್ಧತೆ ನಡೆಸುವವರು ದಿನಕ್ಕೆ ಒಂದು ಕಿತ್ತಳೆ ಸೇವಿಸಬಹುದು.
ಬಾದಾಮಿ – ಶಕ್ತಿ ನೀಡುವ ಆಹಾರ
ಬಾದಾಮಿಯಲ್ಲಿ ಪ್ರೋಟೀನ್ ಹಾಗೂ ಕಬ್ಬಿಣ ಅಂಶಗಳಿರುವುದರಿಂದ, ಇದು ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ರಕ್ತದಾನ ಮಾಡಿದ ಬಳಿಕ ಆಯಾಸ ಅಥವಾ ಶಕ್ತಿನಷ್ಟವನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ.
ಮಟನ್ – ಪ್ರೋಟೀನ್ ಮತ್ತು ಕಬ್ಬಿಣದ ಶಕ್ತಿ
ಮಾಂಸಾಹಾರ ಸೇವನೆ ಮಾಡುವವರಿಗೆ ಮಟನ್ ಉತ್ತಮ ಆಯ್ಕೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣ ಹಾಗೂ ಪ್ರೋಟೀನ್ ಇರುತ್ತದೆ. ದೇಹದ ಶಕ್ತಿಯನ್ನು ಹೆಚ್ಚಿಸಲು ಮತ್ತು ರಕ್ತದ ಹಿಮೋಗ್ಲೋಬಿನ್ ಮಟ್ಟವನ್ನು ಸಮತೋಲನಗೊಳಿಸಲು ಮಟನ್ ನೆರವಾಗುತ್ತದೆ.
ಜಲಸೇವನೆ – ಅತ್ಯಗತ್ಯ ಕ್ರಮ
ರಕ್ತದ ಶೇಕಡಾ 50ರಷ್ಟು ಭಾಗ ನೀರಿನಿಂದ ಕೂಡಿರುತ್ತದೆ. ರಕ್ತದಾನ ಮಾಡುವ ಮುನ್ನ ಹಾಗೂ ನಂತರ ಸರಿಯಾದ ಪ್ರಮಾಣದ ನೀರು ಸೇವನೆ ಮಾಡದಿದ್ದರೆ, ದೇಹದಲ್ಲಿ ದ್ರವಾಂಶ ಕೊರತೆ ಉಂಟಾಗಿ ತಲೆಸುತ್ತು ಅಥವಾ ಶಕ್ತಿಹೀನತೆ ಅನುಭವವಾಗಬಹುದು. ಆದ್ದರಿಂದ ಸಾಕಷ್ಟು ನೀರನ್ನು ಸೇವಿಸುವುದು ಅತ್ಯಗತ್ಯ.
ರಕ್ತದಾನಕ್ಕಿಂತ ಮೊದಲು ಸರಿಯಾದ ಆಹಾರ ಸೇವನೆಯು ದೇಹವನ್ನು ರಕ್ತ ದಾನಕ್ಕೆ ಸಿದ್ಧಗೊಳಿಸುತ್ತದೆ. ಇದರಿಂದ ಶಕ್ತಿಯ ಕೊರತೆ, ಆಯಾಸ ಮತ್ತು ನಷ್ಟವನ್ನು ತಡೆಗಟ್ಟಬಹುದು.