ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ (BJP) ಮತ ಚಲಾಯಿಸಿದ್ದಕ್ಕೆ ಸಂಬಂಧಿಯಿಂದಲೇ ಹಲ್ಲೆಗೆ ಒಳಗಾಗಿದ್ದ ಮಹಿಳೆಯನ್ನು ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಭೇಟಿಯಾಗಿ ಧೈರ್ಯ ತುಂಬಿದ್ದಾರೆ.
ಬಿಜೆಪಿಗೆ ಮತ ಹಾಕಿದ ಸಮೀನಾ ಬಿ ಅವರು ತಮ್ಮ ಇಬ್ಬರು ಮಕ್ಕಳನ್ನು ಚೌಹಾಣ್ ಅವರ ಮನೆಗೆ ಕರೆದುಕೊಂಡು ಬಂದಿದ್ದು ಅವರ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಭೇಟಿಯ ವೇಳೆ ಚೌಹಾಣ್ ಜೊತೆ ನಾನು ಬಿಜೆಪಿಗೆ ಮತ ಹಾಕಿದ್ದಕ್ಕೆ ನನ್ನ ಮೇಲೆ ಥಳಿಸಲಾಗಿದೆ ಎಂದು 30 ವರ್ಷದ ಸಮೀನಾ ಹೇಳಿದ್ದಾರೆ.
ಚೌಹಾಣ್ ಅವರು ಯಾವುದೇ ತಪ್ಪು ಮಾಡಿಲ್ಲ. ಉತ್ತಮ ಆಡಳಿತ ನೀಡಿದ್ದಾರೆ. ಅದಕ್ಕೆ ನಾನು ಸಂವಿಧಾನ ನೀಡಿದ ಹಕ್ಕನ್ನು ಚಲಾಯಿಸಿದ್ದೇನೆ ಎಂದು ಸಮೀನಾ ತಿಳಿಸಿದ್ದಾರೆ.
ಹಲ್ಲೆ ಪ್ರಕರಣ ದಾಖಲಾದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಚೌಹಾಣ್ ಅವರು ಮಹಿಳೆಯನ್ನು ಭೇಟಿ ಮಾಡಲು ನಿರ್ಧರಿಸಿದ್ದರು.
ಏನಿದು ಘಟನೆ?
ಮಧ್ಯಪ್ರದೇಶದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದ ಬಳಿಕ ಸಮೀನಾ ಸಂಭ್ರಮಾಚರಣೆ ಮಾಡಿದ್ದರು. ಇದು ಮಹಿಳೆಯ ಕುಟುಂಬಕ್ಕೆ ಕಸಿವಿಸಿ ಉಂಟುಮಾಡಿತ್ತು. ಸಮೀನಾ ವಿರುದ್ಧ ಸಿಟ್ಟಾದ ಮೈದುನ ಜಾವೇದ್ ಖಾನ್ ನಿಂದಿಸತೊಡಗಿದ್ದನು.ಜಾವೇದ್ ಬಳಸಿದ ಭಾಷೆಯನ್ನು ಪ್ರಶ್ನಿಸಿದ್ದಕ್ಕೆ ಸಮೀನಾ ಮೇಲೆ ಬಡಿಗೆಯಿಂದ ಹಲ್ಲೆ ಮಾಡಿದ್ದ. ಇದರಿಂದ ಆಕೆಯ ಕೈಗಳು ಮತ್ತು ದೇಹದ ಇತರೆ ಭಾಗಗಳಲ್ಲಿ ಗಾಯಗಳಾಗಿತ್ತು.