ಎಣ್ಣೆಯುಕ್ತ ಚರ್ಮದಿಂದ (Oily Skin) ಬಳಲುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಕಿಶೋರಾವಸ್ಥೆಯ ಹುಡುಗಿಯರಲ್ಲಿ ಮೊಡವೆಗಳು, ಕಲೆಗಳು ಹಾಗೂ ತ್ವಚೆಯ ಹೊಳಪು ಕಳೆಗುಂದುವ ಸಮಸ್ಯೆಗಳು ಸಾಮಾನ್ಯವಾಗಿದೆ. ಈ ಚರ್ಮದ ಸಮಸ್ಯೆಗೆ ಪ್ರಮುಖ ಕಾರಣವೆಂದರೆ ಚರ್ಮದ ಒಳಗಿನ ಸೆಬಾಸಿಯಸ್ ಗ್ರಂಥಿಗಳು ಅತಿಯಾದ ಎಣ್ಣೆಯನ್ನು ಹೊರಸೂಸುವುದು.
ಮಾರ್ಕೆಟ್ ನಲ್ಲಿ ಹಲವಾರು ಬ್ಯೂಟಿ ಪ್ರಾಡಕ್ಟ್‌ಗಳನ್ನು ಬಳಸುವವರು ಈ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ. ಆದರೆ ಈ ಉತ್ಪನ್ನಗಳಲ್ಲಿ ಇರುವುದು ರಾಸಾಯನಿಕಗಳು. ಇದರಿಂದಾಗಿ ತಾತ್ಕಾಲಿಕ ಉಪಶಮನವಿದ್ದರೂ ದೀರ್ಘಕಾಲಕ್ಕೆ ಚರ್ಮದ ಮೇಲಿನ ಹಾನಿ ಹೆಚ್ಚಾಗುತ್ತದೆ. ತಜ್ಞರ ಪ್ರಕಾರ, ನೈಸರ್ಗಿಕವಾಗಿ ಎಣ್ಣೆಯ ಚರ್ಮವನ್ನು ನಿಯಂತ್ರಿಸಲು ಮನೆಮದ್ದುಗಳು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.
ಹಾಲನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಿಂದ ತೊಳೆಯುವುದು ಒಳ್ಳೆಯದು. ಜೇನುತುಪ್ಪವನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಮಸಾಜ್ ಮಾಡಿದರೆ, ಹೆಚ್ಚುವರಿ ಎಣ್ಣೆಯು ಕಡಿಮೆಯಾಗುತ್ತದೆ. ನಿಂಬೆರಸ ಹಾಗೂ ಐಸ್ ವಾಟರ್‌ನ ಮಿಶ್ರಣದಿಂದ ಮುಖ ತೊಳೆಯುವುದರಿಂದ ಎಣ್ಣೆಯ ಮಟ್ಟ ಕಡಿಮೆಯಾಗುತ್ತದೆ. ಬಿಸಿ ನೀರು ಕೂಡ ತ್ವಚೆಯ ಕೊಳೆ ಹಾಗೂ ಎಣ್ಣೆ ನಿವಾರಣೆಗೆ ಸಹಾಯಕ.
ಬಾದಾಮಿ ಪುಡಿ ಹಾಗೂ ಜೇನುತುಪ್ಪ ಮಿಶ್ರಣ, ಅಲೋವೆರಾ ಜೇಲ್‌ನೊಂದಿಗೆ ಓಟ್ಸ್ ಪುಡಿ, ಮೊಟ್ಟೆಯ ಬಿಳಿಭಾಗ ಹಾಗೂ ಬೇಳೆ ಹಿಟ್ಟು ಮಿಶ್ರಣ ಇವುಗಳಿಂದ ತ್ವಚೆಗೆ ಪ್ಯಾಕ್ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಫೇಸ್ ವಾಶ್ ಬಳಸುವ ಪ್ರಮಾಣ ದಿನಕ್ಕೆ 2 ಬಾರಿಗೆ ಮಿತವಾಗಿ ಇರಬೇಕು. ಅಲ್ಲದೆ ಎಣ್ಣೆ ಹಾಗೂ ಒಣ ತ್ವಚೆಗೆ ಹೊಂದುವ ಮಲ್ಟಿ ಕ್ಲೀನ್ಸರ್ ಬಳಸುವುದು ಉತ್ತಮ.
ಆಹಾರದಲ್ಲೂ ಎಣ್ಣೆಯ ಪದಾರ್ಥಗಳನ್ನು ತಪ್ಪಿಸುವ ಮೂಲಕ ಈ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.