ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯಕರ ಹಾಗೂ ಹೊಳೆಯುವ ಚರ್ಮವನ್ನು ಉಳಿಸಿಕೊಳ್ಳುವುದು ತುಂಬಾ ಕಷ್ಟಾನೇ ಸರಿ. ಮಾರುಕಟ್ಟೆಯಲ್ಲಿರುವ ದುಬಾರಿ ಬ್ಯೂಟಿ ಕ್ರೀಮ್‌ಗಳು, ಪಾರ್ಲರ್ ಥೆರಪಿ ಗಳಿಗೂ ಹೊರತಾಗಿ ನೈಸರ್ಗಿಕವಾಗಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಕಷ್ಟು ಮನೆಮದ್ದುಗಳು, ದಿನಚರಿಯ ಚಿಕ್ಕಚಿಕ್ಕ ಬದಲಾವಣೆಗಳು ಸಾಕು ಎನ್ನುವುದು ತಜ್ಞರ ಸಲಹೆ. ವಿಶೇಷವಾಗಿ ಬೆಳಿಗ್ಗೆಯ ಸಮಯದಲ್ಲಿ ನಾವು ಕೈಗೊಂಡ ಕೆಲ ಅಭ್ಯಾಸಗಳು ದೀರ್ಘಕಾಲಿಕ ಫಲಿತಾಂಶ ನೀಡುತ್ತವೆ.
ಉಗುರು ಬೆಚ್ಚಗಿನ ನಿಂಬೆ ನೀರಿನಿಂದ ದಿನದ ಆರಂಭ:
ಬೇಗನೆ ಎದ್ದ ತಕ್ಷಣ ಕೇವಲ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧ ನಿಂಬೆಹಣ್ಣನ್ನು ಹಿಂಡಿ ಸೇವಿಸಿ. ಇದಕ್ಕೆ ಸ್ವಲ್ಪ ಜೇನುತುಪ್ಪ ಕೂಡ ಸೇರಿಸಬಹುದು. ಇದು ದೇಹದ ಒಳಗಿನಿಂದ ಡಿಟಾಕ್ಸ್ ಆಗಿ ಚರ್ಮ ಸ್ವಚ್ಛವಾಗಲು ನೆರವಾಗುತ್ತದೆ. ನಿಂಬೆಯಲ್ಲಿರುವ ವಿಟಮಿನ್ ಸಿ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
ತಣ್ಣೀರಿನಿಂದ ಮುಖ ತೊಳೆಯುವುದು – ಬೆಳಗಿನ ಫ್ರೆಶ್ನೆಸ್ ಗ್ಯಾರೆಂಟಿ:
ರಾತ್ರಿ ಮಲಗಿದ ನಂತರ ಮುಖ ಬಿಳುಪಾಗಿರುವಂತಾಗುತ್ತದೆ. ತಕ್ಷಣ ತಣ್ಣೀರಿನಿಂದ ತೊಳೆಯುವುದು ಚರ್ಮವನ್ನು ಬಿಗಿಗೊಳಿಸುವುದರೊಂದಿಗೆ ಊತವನ್ನು ಕಡಿಮೆ ಮಾಡುತ್ತದೆ. ಈ ಸಮಯದಲ್ಲಿ ಅಲೋವೆರಾ ಜೆಲ್ ಅಥವಾ ರೋಸ್ ವಾಟರ್‌ನ್ನು ಬಳಸಿದರೆ ಚರ್ಮ ತೇವಗೊಂಡು ನೈಸರ್ಗಿಕವಾಗಿ ನವೀಕರಿಸುತ್ತದೆ.
ಯೋಗ – ನಿಮ್ಮ ಮುಖದ ಬ್ಯೂಟಿ ಫಿಲ್ಟರ್:
ಪ್ರತಿ ಬೆಳಿಗ್ಗೆಯೂ ಕನಿಷ್ಠ 15 ನಿಮಿಷ ನಡಿಗೆ, ಸೂರ್ಯನಮಸ್ಕಾರ ಅಥವಾ ಸಿಂಪಲ್ ಸ್ಟ್ರೆಚಿಂಗ್ ವ್ಯಾಯಾಮಗಳು ದೇಹದ ರಕ್ತ ಸಂಚಾರವನ್ನು ಸುಧಾರಿಸುತ್ತವೆ. ಇದು ಚರ್ಮದ ಪೋಷಣೆಗೆ ಸಹಾಯಕವಾಗುತ್ತದೆ. ಬೆವರಿನ ಮೂಲಕ ದೇಹದಲ್ಲಿನ ವಿಷಕಣಗಳು ಹೊರಬರಲಿದ್ದು, ಈ ಮೂಲಕ ಹೊಳೆಯುವ ಚರ್ಮಕ್ಕೆ ದಾರಿ ತೆರೆದುಕೊಳ್ಳುತ್ತದೆ.
ಧ್ಯಾನ – ಒತ್ತಡ ಕಮ್ಮಿ, ಚರ್ಮ ಶಾಂತ:
ಪೆರ್ಫೆಕ್ಟ್ ಸ್ಕಿನ್‌ಗೆ ಕೇವಲ ಹೊರಗಿನ ಅಂಶಗಳಷ್ಟೇ ಸಾಕಾಗದು. ಒಳಗಿನ ಮನೋಶಾಂತಿ ಸಹ ಅಗತ್ಯ. ಬೆಳಿಗ್ಗೆ 5 ನಿಮಿಷ ಕಣ್ಣು ಮುಚ್ಚಿ ಆಳವಾಗಿ ಉಸಿರಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಇದು ಚರ್ಮದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಧ್ಯಾನದಿಂದ ಚರ್ಮದ ಮೊಡವೆ, ಕಪ್ಪು ಕಲೆಗಳು, ಮಂದತೆ ಇತ್ಯಾದಿಗಳನ್ನು ದೂರ ಮಾಡಬಹುದು.
ಖಾಲಿ ಹೊಟ್ಟೆಗೆ ಪೋಷಕಾಂಶಗಳು – ಒಳಗಿನಿಂದ ಉಜ್ವಲತೆ:
ಹೆಚ್ಚು ಹೊಳೆಯುವ ಚರ್ಮಕ್ಕೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪೋಷಕಾಂಶಯುಕ್ತ ಆಹಾರ ಸೇವನೆಯೂ ಬಹುಮುಖ್ಯ. ಒಂದು ಸೇಬು, 4-5 ನೆನೆಸಿದ ಬಾದಾಮಿ, ಹಾಗೂ ಒಂದು ಲೋಟ ಎಳನೀರು ನಿಮ್ಮ ಚರ್ಮಕ್ಕೆ ಬೇಕಾದ ವಿಟಮಿನ್ ಸಿ, ಇ ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ನೀಡುತ್ತದೆ. ಜೊತೆಗೆ ಹಾಲು ಕುಡಿಯುತ್ತಿದ್ದರೆ ಅದಕ್ಕೆ ಅರಿಶಿನ ಅಥವಾ ಅಶ್ವಗಂಧಾ ಸೇರಿಸಿಕೊಂಡರೆ, ಇದು ಚರ್ಮದ ಆರೋಗ್ಯ ಹೆಚ್ಚಿಸಲು ಇನ್ನಷ್ಟು ಉತ್ತಮ.
ಏನೇ ಕ್ರೀಮ್ ಬಳಸಿದರೂ, ನೈಸರ್ಗಿಕ ಹೈಜೆನ್, ಆಹಾರ ಮತ್ತು ಮನಃಶಾಂತಿ ಇಲ್ಲದಿದ್ದರೆ ನಿಖರವಾದ glow ಬರಲ್ಲ. ಬೆಳಿಗ್ಗೆ ಕೇವಲ 30 ನಿಮಿಷ ಸಮಯ ಮೀಸಲಿಟ್ಟರೆ ಸಾಕು, ನೀವು ಯಾವುದೇ ಮೇಕಪ್ ಇಲ್ಲದೇ ಸೌಂದರ್ಯಮಯ ಚರ್ಮವನ್ನು ಹೊಂದಬಹುದು.