ಸುಂದರವಾಗಿ ಕಾಣಬೇಕೆಂಬ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುವುದು ಬಹುತೇಕ ಎಲ್ಲರ ಜೀವನದಲ್ಲೂ ಸಾಮಾನ್ಯ. ಹುಡುಗರು ಅಥವಾ ಹುಡುಗಿಯರು—ಯಾರನ್ನೂ ಬಿಟ್ಟುಕೊಡೋದಿಲ್ಲ. ಹದಿಹರೆಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಸಮಸ್ಯೆ ಕೆಲವರಲ್ಲಿ ಆತ್ಮವಿಶ್ವಾಸಕ್ಕೂ ಧಕ್ಕೆಯನ್ನೇ ಉಂಟುಮಾಡುತ್ತದೆ.
ಮೊಡವೆಗಳು ಚರ್ಮದ ರಂಧ್ರಗಳಲ್ಲಿ ಸೇರುವ ಎಣ್ಣೆ, ಕೊಳಕು ಮತ್ತು ಬ್ಯಾಕ್ಟೀರಿಯಾದಿಂದ ಉಂಟಾಗುತ್ತವೆ. ಹಣೆ, ಮೂಗು ಮತ್ತು ಕೆನ್ನೆ ಭಾಗದಲ್ಲಿ ಹೆಚ್ಚುವರಿ ಎಣ್ಣೆಯ ಉತ್ಪತ್ತಿ ಸಾಮಾನ್ಯ ಕಾರಣ. ಇದರ ಜೊತೆಗೆ ನಿದ್ರೆಯ ಕೊರತೆ, ಆಯಾಸ, ಹಾರ್ಮೋನ್ ಬದಲಾವಣೆಗಳು ಮತ್ತು ಅಸ್ವಚ್ಛತೆಯೂ ಮೊಡವೆಗೆ ಕಾರಣವಾಗುತ್ತದೆ. ಯುವತಿಯರಲ್ಲಿ ಪಿರಿಯಡ್ಸ್ ಸಮಯದಲ್ಲಿ ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳುವುದು ಸಹಜ.
ಕೆನ್ನೆ ಭಾಗದಲ್ಲಿ ಪದೇ ಪದೇ ಮೊಡವೆ ಕಾಣಿಸಿಕೊಂಡರೆ, ಅದರ ಹಿಂದೆ ದಿಂಬಿನ ಕವರ್‌ಗಳಲ್ಲಿರುವ ಧೂಳು ಅಥವಾ ಮೊಬೈಲ್ ಫೋನ್ ಬಳಕೆಯಿಂದ ಹರಡುವ ಬ್ಯಾಕ್ಟೀರಿಯಾ ಪ್ರಮುಖ ಕಾರಣವಾಗಿರಬಹುದು. ದಿಂಬಿನ ಕವರ್‌ಗಳನ್ನು ನಿಯಮಿತವಾಗಿ ಬದಲಿಸುವುದು, ಮೊಬೈಲ್ ಕ್ಲೀನ್ ಮಾಡುವುದು ಮುಂತಾದ ಚಿಕ್ಕ ಬದಲಾವಣೆಗಳಿಂದ ಮೊಡವೆ ತಡೆಯಬಹುದು.
ಮೊಡವೆ ಕಂಡ ಕೂಡಲೇ ಅದನ್ನು ಒತ್ತುವುದು ತಪ್ಪು. ಬದಲಿಗೆ ತಣ್ಣೀರಿನಿಂದ ಮುಖ ತೊಳೆಯುವುದು, ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸುವುದು ಅಥವಾ ಐಸ್ ಪ್ಯಾಕ್ ಬಳಸುವುದರಿಂದ ಉರಿಯೂತ ಕಡಿಮೆಯಾಗುತ್ತದೆ. ಕೈಯನ್ನು ಮುಖಕ್ಕೆ ಮುಟ್ಟುವ ಮೊದಲು ತೊಳೆಯುವುದೂ ಅತ್ಯಂತ ಮುಖ್ಯ.
ಮೊಡವೆಗಳು ಅಪಾಯಕಾರಿ ಚರ್ಮದ ಸಮಸ್ಯೆಯಲ್ಲ, ಆದರೆ ನಿರ್ಲಕ್ಷಿಸಿದರೆ ಕಲೆಗಳು ಉಳಿಯುವ ಸಾಧ್ಯತೆ ಇದೆ. ಸಮರ್ಪಕ ನಿದ್ರೆ, ಸ್ವಚ್ಛತೆ, ಮತ್ತು ಸರಿಯಾದ ಚರ್ಮದ ಆರೈಕೆಯಿಂದ ಮೊಡವೆ ಸಮಸ್ಯೆಯನ್ನು ನಿಯಂತ್ರಿಸಬಹುದು. ಆರೋಗ್ಯಕರ ಜೀವನಶೈಲಿಯೊಂದಿಗೆ ಸ್ವಚ್ಛತೆಯ ಅಭ್ಯಾಸ ಪಾಲಿಸಿದರೆ ಮೊಡವೆಗಳ ತೊಂದರೆಯಿಂದ ದೂರವಿರಬಹುದು.