ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಇದೀಗ ಮತ್ತೆ ತಮ್ಮ ಆರೋಗ್ಯ ಸಮಸ್ಯೆಗಳನ್ನು ನ್ಯಾಯಾಲಯದ ಮುಂದೆ ಪ್ರಸ್ತಾಪಿಸಿದ್ದಾರೆ. ನಿನ್ನೆ (ನವೆಂಬರ್ 19) ಚಳಿಯ ತೀವ್ರತೆಯಿಂದ ನಿದ್ರೆ ಮಾಡಲು ಕಷ್ಟವಾಗುತ್ತಿದೆ, ಹೀಗಾಗಿ ಹೆಚ್ಚುವರಿ ಬೆಡ್‌ಶೀಟ್ ನೀಡುವಂತೆ ಮನವಿ ಮಾಡಿಕೊಂಡಿದ್ದ ದರ್ಶನ್, ಇಂದು ಅದೇ ವಿಚಾರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಬೆನ್ನುನೋವಿನ ಸಮಸ್ಯೆ ಉಲ್ಬಣ:
ಬೆಡ್‌ಶೀಟ್ ಕೋರಿಕೆಯ ಕುರಿತು ಜೈಲು ಅಧಿಕಾರಿಗಳಿಗೆ ಸೂಚನೆ ನೀಡುವ ಸಂದರ್ಭದಲ್ಲಿ, ದರ್ಶನ್ ಅವರು ತಮ್ಮ ಬೆನ್ನುನೋವು ಹೆಚ್ಚಾಗಿರುವ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದರು. “ನನಗೆ ಬೆನ್ನುನೋವು ಹೆಚ್ಚಾಗಿದೆ. 2 ಬಾರಿ ಫಿಸಿಯೋಥೆರಪಿ ಮಾಡಿಸಿ, ಅದನ್ನು ನಿಲ್ಲಿಸಿಬಿಟ್ಟಿದ್ದಾರೆ,” ಎಂದು ಅವರು ಅಳಲು ತೋಡಿಕೊಂಡರು. ಇದರ ಹಿನ್ನೆಲೆಯಲ್ಲಿ, ನ್ಯಾಯಾಲಯವು ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆಯನ್ನು ಮುಂದುವರಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಆರೋಪಿಗಳ ಪರ ದರ್ಶನ್ ಧ್ವನಿ:
ಬುಧವಾರ (ನ.19) ನ್ಯಾಯಾಲಯದಲ್ಲಿ ಟ್ರಯಲ್ ಆರಂಭದ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್, ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳು ಹಾಜರಾಗಿದ್ದರು. ಈ ವೇಳೆ ಆರೋಪಿ ನಾಗರಾಜ್ ಅವರು, “ಸ್ವಾಮಿ, ಬೆಡ್‌ಶೀಟ್ ಕೊಡಿಸಿ, ಜೈಲು ಸಿಬ್ಬಂದಿ ಕೊಡುತ್ತಿಲ್ಲ. ಮನೆಯಿಂದ ತಂದು ಕೊಟ್ಟರೂ ಅದನ್ನು ಕೊಡಲು ಬಿಡುತ್ತಿಲ್ಲ” ಎಂದು ಕೋರಿಕೊಂಡರು.
ತಕ್ಷಣವೇ ಮೈಕ್ ಹಿಡಿದ ನಟ ದರ್ಶನ್, “ಸ್ವಾಮಿ, ಇದು ನನ್ನೊಬ್ಬನ ಸಮಸ್ಯೆ ಅಲ್ಲ, ಎಲ್ಲ ಆರೋಪಿಗಳ ಸಮಸ್ಯೆ. ತುಂಬಾನೇ ಚಳಿ ಇದೆ ಸರ್. ಚಳಿಗೆ ರಾತ್ರಿಪೂರ್ತಿ ನಿದ್ರೆ ಬರುತ್ತಿಲ್ಲ. ನಿದ್ರೆ ಇಲ್ಲದೆ ರಾತ್ರಿಯೆಲ್ಲಾ ಎದ್ದು ಕೂರುತ್ತಿದ್ದೇವೆ. ಮೂಲೆಯಲ್ಲಿ ಕುಳಿತು ಕಾಲ ದೂಡುತ್ತಿದ್ದೇವೆ. ಎಲ್ಲರಿಗೂ ತೀವ್ರ ತೊಂದರೆಯಾಗಿದೆ, ಸಿಕ್ಕಾಪಟ್ಟೆ ಚಳಿ ಇದೆ. ದಯವಿಟ್ಟು ಬೆಡ್‌ಶೀಟ್ ಕೊಡಿಸಿ,” ಎಂದು ಕೋರ್ಟ್‌ಗೆ ಮನವಿ ಮಾಡಿದರು.

