ಹೊಸದಿಗಂತ ವರದಿ, ಮಡಿಕೇರಿ
ವೀರಾಜಪೇಟೆ ಪಟ್ಟಣದ ಸುಣ್ಣದ ಬೀದಿಯ ಮಿನಿ ಹೊಟೇಲ್’ನಲ್ಲಿ ಗೋಮಾಂಸ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುಣ್ಣದ ಬೀದಿ ನಿವಾಸಿ ತನ್ವೀರ್ (25) ಹಾಗೂ ವಿಜಯನಗರ ನಿವಾಸಿ ಆಸಿಫ್ (28) ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ದಾಳಿ ಸಂದರ್ಭ ಹೊಟೇಲ್ ಮಾಲಕ ತಲೆ ಮರೆಸಿಕೊಂಡಿದ್ದಾನೆ. ಮಾಲೀಕ ಮುಸ್ತಫಾ (35)ನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮೂವರ ವಿರುದ್ಧ ಗೋವು ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಹೊಟೇಲ್’ನಲ್ಲಿ ಗೋಮಾಂಸ ಇರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದರು. ಈ ಸಂದರ್ಭ ಸುಮಾರು 7 ಕೆಜಿಯಷ್ಟು ಗೋಮಾಂಸ ಪತ್ತೆಯಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಅವರ ಅದೇಶದ ಮೇರೆಗೆ ವೀರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ಸಿ.ಟಿ.ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್ ಅವರ ನಿರ್ದೇಶನದ ಮೇರೆಗೆ ವೀರಾಜಪೇಟೆ ನಗರ ಠಾಣಾಧಿಕಾರಿ ಜಗದೀಶ್ ಧೂಳ ಶೆಟ್ಟಿ, ಸಿಬ್ಬಂದಿಗಳಾದ ಮುಸ್ತಫಾ ಗಿರೀಶ್, ಸುಬ್ರಮಣಿ, ಧರ್ಮ, ಸತೀಶ್ ಹಾಗೂ ಚಾಲಕ ರಮೇಶ್ ಕಾರ್ಯಾಚರಣೆ ನಡೆಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ