ಹೊಸದಿಗಂತ ವರದಿ, ಸೋಮವಾರಪೇಟೆ :
ಕಾಫಿ ತೋಟದಿಂದ ಅಕ್ರಮವಾಗಿ ಬೀಟೆ ಮರ ಸಾಗಾಟ ಮಾಡಿದ ಆರೋಪದಡಿ ಇಬ್ಬರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಹೊಸತೋಟ ಗರಂದೂರು ಬಿ.ತೋಟ ನಿವಾಸಿ ಬಿ.ಎಲ್.ಆದಿತ್ಯ, ಬೇಳೂರು ಬಸವನಳ್ಳಿ ಗ್ರಾಮದ ಶಾಂತಕುಮಾರ್ ಬಂಧಿತ ಆರೋಪಿಗಳು.
ಟಿಪ್ಪರ್’ನಲ್ಲಿ ಬೆಲೆಬಾಳುವ ನಾಟಾಗಳನ್ನು ಸಾಗಾಟ ಮಾಡಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಐಗೂರು ಗ್ರಾಮದ ಮೋಹನ್ ದಾಸಪ್ಪ ಅವರಿಗೆ ಸೇರಿದ ಗರಗಂದೂರು ಎ. ಎಸ್ಟೇಟ್‍ನಲ್ಲಿ ಒಂದು ಭಾರೀ ಗಾತ್ರದ ಬೀಟೆ ಮರವನ್ನು ರಾತ್ರಿ ಕಡಿದ ಮರಗಳ್ಳರ ತಂಡ ನಾಟಾಗಳನ್ನು ಟಿಪ್ಪರ್’ನಲ್ಲಿ ಸಾಗಿಸಿದೆ.
ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ ಸಂದರ್ಭ, ಯೋಗ್ಯವಲ್ಲದ ನಾಟಾಗಳು ದೊರೆತಿವೆ. ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಅಧಿಕಾರಿಗಳ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿ ಮೊಕದ್ದಮೆ ದಾಖಲಿಸಿ, ಸೋಮವಾರಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೆಹರು ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಎಚ್.ಪಿ.ಚೇತನ್, ಡಿಆರ್‍ಎಫ್‍ಓ ವೈ.ಕೆ.ಜಗದೀಶ್, ಎನ್.ಬಿ.ಸತೀಶ್ ಕುಮಾರ್, ಅರಣ್ಯ ರಕ್ಷಕರಾದ ಭರಮಪ್ಪ, ಬಿ.ಜಿ.ಚೇತನ್, ಅರಣ್ಯ ವೀಕ್ಷಕ ವೀರಪ್ಪ, ಚಾಲಕರಾದ ನಂದೀಶ್ ಮತ್ತು ಸಂತೋಷ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಐಗೂರು ವ್ಯಾಪ್ತಿಯಲ್ಲಿ ಕಂಪೆನಿ ತೋಟಗಳಿದ್ದು, ಬೆಲೆಬಾಳುವ ಬೀಟೆ ಮರಗಳಿವೆ. ಈ ವ್ಯಾಪ್ತಿಯಲ್ಲಿ ಕುಖ್ಯಾತ ಮರಗಳ್ಳರ ತಂಡಗಳು ಇದ್ದು, ರಾತ್ರಿಯಾದಂತೆ ಕಾರ್ಯಾಚರಣೆಗೆ ಇಳಿಯುತ್ತವೆ. ಅಪರೂಪಕ್ಕೆ ಪ್ರಕರಣಗಳು ಬೆಳಕಿಗೆ ಬಂದರೂ, ಕುಖ್ಯಾತ ಮರಗಳ್ಳರನ್ನು ಅಧಿಕಾರಿಗಳು ಬಂಧಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮರಗಳ್ಳತನ ನಿರಂತರವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.